(ನ್ಯೂಸ್ ಕಡಬ) newskadaba.com ಕಡಬ, ಅ. 23. ಹೃದ್ರೋಗ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿರುವ 11 ವರ್ಷದ ಬಾಲಕಿ ಶಹನಾಝ್ ಳ ಚಿಕಿತ್ಸೆಗೆ ಇದೀಗ ದಾನಿಗಳ ಸಹಾಯಹಸ್ತ ಬೇಕಾಗಿದೆ.
ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕಡಬ ಸಮೀಪದ ಕಲ್ಲಂತಡ್ಕ ಕುತ್ಯಾಡಿ ಎಂಬಲ್ಲಿ ವಾಸವಿರುವ ಇಸಾಕ್ ಹಾಗೂ ತಾಜುನ್ನಬಿ ದಂಪತಿಯ ಪುತ್ರಿ ಶಹನಾಝ್ ಹೃದ್ರೋಗ ಮತ್ತು ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈ ಬಾಲಕಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಹನಾಝ್ ಪೆರ್ಲದ ಶಾಲೆಯಲ್ಲಿ 5ನೆ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕೂಲಿ ಕಾರ್ಮಿಕ ಇಸಾಕ್ ಮತ್ತು ಬೀಡಿ ಕಟ್ಟಿ ಜೀವನ ನಡೆಸುತ್ತಿರುವ ತಾಜುನ್ನಬಿ ಇವರದ್ದು ಬಡ ಕುಟುಂಬ. ಈ ಕುಟುಂಬವು ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ದಂಪತಿಗಳಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳಿಲ್ಲ. ಅವರ ಮೂರನೆಯ ಪುತ್ರಿ ಶಹನಾಝ್. ಕಾಸರಗೋಡಿನ ಪೆರ್ಲದಲ್ಲಿ ಇತ್ತೀಚಿನ ತನಕ ಬಾಡಿಗೆ ಮನೆಯಲ್ಲಿ ಈ ಕುಟುಂಬ ವಾಸವಾಗಿತ್ತು. ತಾಜುನ್ನಬಿ ಅವರು ಬೀಡಿ ಕಟ್ಟುವ ಜೊತೆಗೆ ಅವರಿವರ ಮನೆಯಲ್ಲಿ ಬಾಣಂತನ ನೋಡಿಕೊಳ್ಳುವ ಕಾಯಕವನ್ನೂ ಮಾಡಿ ಬರುವ ಆದಾಯದಿಂದ ಮನೆಯನ್ನು ನೋಡಿಕೊಳ್ಳುತ್ತಿದ್ದರು. 2 ವರ್ಷಗಳ ಹಿಂದೆ ಕಾಲಿನ ತೊಂದರೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ತಾಜುನ್ನಬಿ ಅವರು ಸರಿಯಾಗಿ ನಡೆದಾಡಲೂ ಕಷ್ಟ ಪಡುತ್ತಿದ್ದಾರೆ. ಆದರೂ ಮಕ್ಕಳ ಹಸಿವು ನೀಗಿಸಲು ತನ್ನ ನೋವನ್ನು ಮರೆತು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಮಗಳ ಅನಾರೋಗ್ಯ ಈ ತಾಯಿಯನ್ನು ತಲ್ಲಣಿಸುವಂತೆ ಮಾಡಿದೆ.
ವೈದ್ಯರು ಮಗುವಿನ ಚಿಕಿತ್ಸೆಗಾಗಿ 8 ಲಕ್ಷ ರೂ. ಬೇಕಾಗಿದೆ. ನಿರಂತರ ಮೂರು ವರ್ಷಗಳ ಕಾಲ ಚಿಕಿತ್ಸೆ ಮುಂದುವರಿಸಬೇಕಾಗಿದೆ ಎಂದು ತಿಳಿಸಿದ್ದು, ಇದರಿಂದಾಗಿ ಈ ಬಡ ಕುಟುಂಬ ಕಂಗಾಲಾಗಿದೆ. ತಾಯಿ ತಾಜುನ್ನಬಿ ಮಗುವಿನ ಆರೈಕೆಗಾಗಿ ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳಬೇಕಾಗಿರುವುದರಿಂದ ಕೆಲಸ ಮಾಡಲೂ ಸಾಧ್ಯವಿಲ್ಲದೆ ಕುಟುಂಬ ತುತ್ತು ಅನ್ನಕ್ಕೂ ಪರದಾಡಬೇಕಾಗಿದೆ.
ದಾನಿಗಳಲ್ಲಿ ಕಾಡಿ ಬೇಡಿ ಈಗಾಗಲೇ ಮಗುವಿನ ಚಿಕಿತ್ಸೆಗಾಗಿ 2 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದಾರೆ. ತನ್ನ ಮಗುವನ್ನು ಉಳಿಸಿಕೊಳ್ಳಲು ದಾನಿಗಳ ಸಹಾಯ ಯಾಚಿಸಿದ್ದಾರೆ. ಆಸಕ್ತ ದಾನಿಗಳು ತಾಜುನ್ನಬಿ ಅವರ ಖಾತೆಗೆ ಸಹಾಯ ನೀಡಬಹುದು. ವಿಜಯ ಬ್ಯಾಂಕ್ ಕಡಬ ಶಾಖೆ, ಖಾತೆ ಸಂಖ್ಯೆ- 123601011004149, ಐಎಫ್‌ಎಸ್ ಕೋಡ್-ವಿಐಜೆಬಿ0001236, ಅಥವಾ ಮೊಬೈಲ್-9400199831 ಇದನ್ನು ಸಂಪರ್ಕಿಸಬಹುದಾಗಿದೆ.