(ನ್ಯೂಸ್ ಕಡಬ) newskadaba.com ಸುಳ್ಯ, ಮಾ.10. ಪಿಕಪ್ ವಾಹನವೊಂದು ವೇಗ ನಿಯಂತ್ರಣಕ್ಕೆಂದು ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬಳಿಕ ಪಕ್ಕದಲ್ಲೇ ಬಸ್ಸಿಗೆ ಕಾಯುತ್ತಿದ್ದ ನಾಲ್ವರಿಗೆ ಢಿಕ್ಕಿಯಾದ ಪರಿಣಾಮ ಯುವಕನೋರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಬುಧವಾರದಂದು ತಾಲೂಕಿನ ಪೆರಾಜೆ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ದುಗ್ಗಲಡ್ಕ ನಿವಾಸಿ ಮುರ್ಷಾದ್ ಎಂದು ಗುರುತಿಸಲಾಗಿದೆ. ಅಡಿಕೆ ಮರ ಕಡಿಯುವ ಕೆಲಸ ನಿರ್ವಹಿಸುತ್ತಿದ್ದ ಮುರ್ಷಾದ್ ತನ್ನ ಸ್ನೇಹಿತರಾದ ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರೊಂದಿಗೆ ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಬಡಿದು ಈ ನಾಲ್ವರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಸತೀಶ್, ಮುರ್ಷಾದ್ ಹಾಗೂ ಉಮ್ಮರ್ ರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯವ ಹಾದಿ ಮಧ್ಯೆ ಮುರ್ಷಾದ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ಮಾಡಿದರು ಪರಿಶೀಲನೆ ನಡೆಸಿದ್ದಾರೆ.