ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಪರಿಗಣನೆ: ಡಾ| ಕೆ.ಜಿ.ಜಗದೀಶ್

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂನ್.7. ಆಧಾರ್ ಕಾರ್ಡ್ ಜಾರಿಯಾದ ಬಳಿಕ ದೇಶದಲ್ಲಿ ಗುರುತಿನ ಚೀಟಿಗೆ ಸಂಬಂಧಪಟ್ಟ ಎಲ್ಲಾ ಗೊಂದಲಗಳು ಪರಿಹಾರವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ಆಧಾರ್ ಸೀಡಿಂಗ್ ಮತ್ತು ಆಧಾರ್ ಕಾರ್ಡಿಗೆ ಸಂಬಂಧಿಸಿದ ಸೇವೆಗಳ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಯಾವುದೇ ಜಾಗದಲ್ಲಿದ್ದರೂ ವ್ಯಕ್ತಿಯ ಗುರುತಿಗೆ ಆಧಾರ್ ಸಂಖ್ಯೆ ಪ್ರಬಲ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ ಎಂದರು. ದ.ಕ. ಜಿಲ್ಲೆಯಲ್ಲಿ ಎಲ್ಲರನ್ನೂ ಆಧಾರ್ ನೋಂದಾಯಿಸಲು ಇನ್ನಷ್ಟು ಚುರುಕುಗೊಳಿಸಲಾಗುವುದು. ಗ್ರಾಮ ಪಂಚಾಯತ್ಗಳ ಮೂಲಕ ಬಾಕಿ ಉಳಿದವರನ್ನು ಆಧಾರ್ಗೆ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಇ-ಆಡಳಿತ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ, ಬಹುತೇಕ ಸರಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ವಿವಿಧ ಯೋಜನೆಗಳಿಗೆ ಆಧಾರ್ ಸೀಡಿಂಗ್ಗೆ ಸಂಬಂಧಪಟ್ಟ ಗೊಂದಲಗಳನ್ನು ನಿವಾರಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಧಾರ್ ದೃಢೀಕರಣ, ಇ ಸಹಿ ಮತ್ತು ಡಿಜಿ ಲಾಕರ್ಗೆ ಸಂಬಂಧಪಟ್ಟಂತೆ ಜಾಗೃತಿಯನ್ನು ಮೂಡಿಸಲಾಗುವುದು. ಆಧಾರ್ ಕಾರ್ಡ್ ಕಳೆದುಕೊಂಡಲ್ಲಿ ವೆಬ್ಸೈಟ್ ಮೂಲಕ ಬೇರೆ ಪ್ರತಿ ಪಡೆಯಬಹುದಾಗಿದೆ. ಆಧಾರ್ ನೋಂದಾಯಿಸಿದ ಬಳಿಕ ಕಾರ್ಡ್ ಬರಲು ವಿಳಂಭವಾದರೆ ಚಿಂತಿಸುವ ಅಗತ್ಯವಿಲ್ಲ. ಸರಕಾರಿ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ಆಧಾರ್ ಕಾರ್ಡ್ ದಾಖಲೆ ಪ್ರತಿಗಿಂತಲೂ ಆಧಾರ್ ಸಂಖ್ಯೆ ಅತಿ ಮುಖ್ಯವಾಗಿದೆ. ಸಾರ್ವಜನಿಕರು ಆಧಾರ್ ಕಾರ್ಡಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳಿಗೆ ಟೋಲ್ ಫ್ರೀ ಸಂಖ್ಯೆ 1947 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪುಜಾರಿ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದವರೆಗಿನ ಮಕ್ಕಳನ್ನು ಆಧಾರ್ಗೆ ನೋಂದಾಯಿಸಲು ಅಂಗನವಾಡಿ ಮೇಲ್ವಿಚಾರಕರಿಗೆ ಟ್ಯಾಬ್ ನೀಡಲಾಗಿದೆ. ಈಗಾಗಲೇ ಇದರಲ್ಲಿ ಶೇಕಡಾ 89ರಷ್ಟು ಗುರಿ ಸಾಧಿಸಲಾಗಿದೆ. ಮುಂದಿನ 1 ತಿಂಗಳಲ್ಲಿ ಬಾಕಿ ಉಳಿದ ಮಕ್ಕಳನ್ನು ಆಧಾರ್ಗೆ ನೋಂದಾಯಿಸಲಾಗುವುದು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 2101494 ಮಂದಿಗೆ ಆಧಾರ್ ಸಂಖ್ಯೆ ನೋಂದಣಿ ಮಾಡಲಾಗಿದ್ದು, ಶೇಕಡಾ 91.66ರಷ್ಟು ಗುರಿ ಸಾಧಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 2284222 ನಾಗರೀಕರಿಗೆ ಆಧಾರ್ ಸಂಖ್ಯೆ ನೋಂದಣಿಗೆ ಗುರಿ ಇಡಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ 6.1 ಕೋಟಿ ಜನರು ಆಧಾರ್ ನೋಂದಾಯಿಸಿದ್ದು, ಇನ್ನೂ 37 ಲಕ್ಷ ಮಂದಿಗೆ ಬಾಕಿ ಇದೆ.
ಬೆಂಗಳೂರು ಇ ಆಡಳಿತ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೇಯಸ್, ರಘು, ನಾಗರಾಜ್ ಮಾಹಿತಿ ನೀಡಿದರು. ಚುನಾವಣಾ ತಹಶೀಲ್ದಾರ್ ಮಾಣಿಕ್ಯ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group