ಕಡಬ, ಜ.03. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡುವ ಮೂಲಕ ಹೆಚ್ಚು ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಎ.ಐ.ಸಿ.ಸಿ.ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಅವರು ಭಾನುವಾರದಂದು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸೀಟುಗಳು ಲಭ್ಯವಾಗಿದ್ದು ಇದು ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ. ದ.ಕ. ಹಾಗೂ ಕೆಲವು ಕಡೆ ಬಿಜೆಪಿಗೆ ಹೆಚ್ಚು ಸೀಟು ಲಭ್ಯವಾಗಿದೆ. ಇದು ವಿರೋಧ ಪಕ್ಷದ ಮೇಲೆ ದಬ್ಬಾಳಿಕೆ ಮಾಡಿ ಅಧಿಕಾರ ದುರುಪಯೋಗದ ಮೂಲಕ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಶೇ. 85 ಗೆದ್ದಿದ್ದೇವೆ ಎನ್ನುವ ಬಿಜೆಪಿಯವರು ತಾಕತ್ತಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಅವಕಾಶ ಮಾಡಿ ಕೊಡಲಿ. ನಾವು ತಯಾರಾಗಿದ್ದೇವೆ ಎಂದ ಅವರು ನಮ್ಮ ಆಡಳಿತದಲ್ಲಿ 1 ಕೋಟಿ 64 ಲಕ್ಷ ಬಿಪಿಎಲ್ ಕಾರ್ಡ್ ನೀಡಿದ್ದೇವೆ, ಆದರೆ ಬಿಜೆಪಿಯವರು 64 ಲಕ್ಷ ಬಿಪಿಎಲ್ ಕಾರ್ಡನ್ನು ರದ್ದು ಮಾಡಿದ್ದಾರೆ. ನಾವು ಪ್ರತಿ ಕಾರ್ಡ್ ಗೂ 7 ಕೆ.ಜಿ. ಅಕ್ಕಿ ಕೊಡುತ್ತಿದ್ದರೆ ಬಿಜೆಪಿಯವರಿಗೆ 5 ಕೆ.ಜಿ ಅಕ್ಕಿ ಕೊಡುವ ಯೋಗ್ಯತೆ ಇಲ್ಲ, ಅಲ್ಲದೆ ಪಿಂಚಣಿ ಹಣ ಕೊಡುವ ಯೋಗ್ಯತೆ ಇಲ್ಲದ ಬಿಜೆಪಿ ಸರಕಾರದ ವಿರುದ್ದ ಜನ ಮತ ಹಾಕಿದ್ದಾರೆ, ಧಾರ್ಮಿಕ ಭಾವನೆಯನ್ನು ಕೆರಳಿಸಿ ಧರ್ಮ ಧರ್ಮಗಳ ಮಧ್ಯೆ ಕಂದಕಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿದ್ದಾರೆ. ಬಿಜೆಪಿಗೆ ಇದು ಕೊನೆಯ ಆಡಳಿತ, ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ಅಧಿಕಾರಕ್ಕೆ ಬಂದ ನಿದರ್ಶನಗಳಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾರ್ಯಕ್ರಮಲ್ಲಿ, ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಅಭಿನಂದಿಸಲಾಯಿತು. ಅಲ್ಲದೆ ಕೆ.ಪಿ.ಸಿ.ಸಿ.ಯ ಮಾಧ್ಯಮ ವಕ್ತಾರರಾಗಿ ನೇಮಕಗೊಂಡ ಫಝಲ್ ಕೋಡಿಂಬಾಳ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಕೆ.ಪಿ.ಸಿ.ಸಿ ಸದಸ್ಯ ಡಾ| ರಘು, ಜಿ.ಪಂ. ಸದಸ್ಯರಾದ ಪಿ.ಪಿ.ವರ್ಗೀಸ್ ಕಡಬ, ಸರ್ವೋತ್ತಮ ಗೌಡ ನೆಲ್ಯಾಡಿ, ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಕಾರ್ಯದರ್ಶಿ ಯತೀಶ್ ಬಾನಡ್ಕ, ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷ ರಾಯ್ ಅಬ್ರಹಾಂ, ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಕೆ.ಟಿ.ತೋಮಸ್, ಸುಳ್ಯ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ, ಮಾಜಿ ಸಿಂಡಿಕೇಟ್ ಸದಸ್ಯ ವಿಜಯ ಕುಮಾರ್ ಸೊರಕೆ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ತಾ.ಪಂ. ಸದಸ್ಯರಾದ ಅಶೋಕ್ ನೆಕ್ರಾಜೆ, ಕೆ.ಟಿ.ವಲ್ಸಮ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಡಿಸಿಸಿ ಸದಸ್ಯರು, ಕಡಬ ಬ್ಲಾಕ್ ಪದಾಧಿಕಾರಿಗಳು ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾ,ಪಂ, ಸದಸ್ಯರು ಉಪಸ್ಥಿತರಿದ್ದರು.