(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.03. ಇತ್ತೀಚೆಗೆ ಕಾಡಾನೆಯ ಉಪಟಳ ಹೆಚ್ಚಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಕಾಡಾನೆ ದಾಳಿಗೆ ರೈತ ಮತ್ತು ಕೂಲಿ ಕಾರ್ಮಿಕ ಸೇರಿ ಇಬ್ಬರು ಬಲಿಯಾದ ಹೃದಯ ವಿದ್ರಾವಕ ಘಟನೆ ರಾಜ್ಯದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ರೈತ ಸ್ವಾಮಿ(61) ಎಂಬವರು ಮುಸುಕಿನ ಜೋಳ ಬೆಳೆದಿದ್ದು, ಕಾಡುಪ್ರಾಣಿಗಳ ದಾಳಿಯಿಂದ ಬೆಳೆಯನ್ನು ರಕ್ಷಿಸಲು ಶನಿವಾರ ರಾತ್ರಿ ತನ್ನ ಜಮೀನಿನ ಬಳಿ ಠಿಕಾಣಿ ಹೂಡಿದ್ದರು. ತಡರಾತ್ರಿ ಕಾಡಾನೆಯ ತುಳಿತಕ್ಕೊಳಗಾದ ಸ್ವಾಮಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲೂ ಇಂತಹದೇ ಘಟನೆ ನಡೆದಿದ್ದು, ಬೇಲೂರಿನ ಲಕ್ಕುಂದ ಗ್ರಾಮದ ಎಸ್ಟೇಟ್ ಒಂದರಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೋರ್ವ ಮೃತಪಟ್ಟಿದ್ದಾರೆ. ಕಾಫಿ ತೋಟದಲ್ಲಿ ಮೆಣಸು ಕಾಯುತಿದ್ದ ಕೇರಳ ಮೂಲದ ಕೂಲಿ ಕಾರ್ಮಿಕ ರಾಜನ್(45) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ತುಳಿತಕ್ಕೊಳಗಾದ ಕೂಲಿಕಾರ್ಮಿಕನ ಮೃತದೇಹವು ಛಿದ್ರವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.