(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.25: ಕೋವಿಡ್-19 ಈ ವರ್ಷ ಅಧಿಕ ಆದಾಯ ತರುವ ದೇವಸ್ಥಾನಗಳನ್ನು ಕೂಡ ಬಿಟ್ಟಿಲ್ಲ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಪದ್ಭರಿತ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳ ಆದಾಯ ಕೂಡ ಕುಸಿದಿದೆ.
ಕರ್ನಾಟಕದಲ್ಲಿರುವ ಪ್ರಮುಖ 12 ದೇವಾಲಯಗಳು ಕಳೆದ ವರ್ಷ ಒಟ್ಟಾರೆ 317 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದ್ದರೆ ಈ ವರ್ಷ ಗಳಿಸಿದ ಆದಾಯ ಕೇವಲ 18.6 ಕೋಟಿ ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕುಕ್ಕೆ ಸುಬ್ರಹ್ಮಣ್ಯ ಪ್ರತಿವರ್ಷ ಸರಾಸರಿ 90 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ, ಆದರೆ ಈ ವರ್ಷ ಗಳಿಸಿದ್ದು ಕೇವಲ 4.2 ಕೋಟಿ ರೂಪಾಯಿ.ಈ ಬಗ್ಗೆ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ವರ್ಷ ದೇವಾಲಯಗಳ ಆದಾಯ ಕಡಿಮೆಯಾಗಿರುವುದು ಹೌದು. ಆದರೆ ಮುಜರಾಯಿ ಇಲಾಖೆಯ ದೇವಾಲಯಗಳ ಸಿಬ್ಬಂದಿಯ ವೇತನಕ್ಕೆ ಧಕ್ಕೆಯಾಗಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ವೇತನ ನೀಡಲು ಹಣ ಸಾಕಷ್ಟಿದ್ದು, ನಿಗದಿತ ಸಮಯಕ್ಕೆ ವೇತನ ನೀಡಲಾಗಿದೆ. ಬ್ಯಾಂಕುಗಳಿಟ್ಟ ಹಣದಿಂದ ಬಂದ ಬಡ್ಡಿಯಿಂದ ವೇತನ ನೀಡಲಾಗಿದೆ ಎಂದರು.