(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ರಥೋತ್ಸವದಲ್ಲಿ ಭಕ್ತರ ಪಾಲ್ಗೊಳ್ಳುವಿಕೆಗೆ ನಿಷೇಧ ಹೇರಲಾಗಿದೆ. ಪ್ರತೀ ವರ್ಷ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತಿದ್ದು, ಈ ರಥೋತ್ಸವದಲ್ಲಿ ರಥ ಎಳೆಯಲು ಭಕ್ತರಿಗೂ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಭಕ್ತರಿಗೆ ರಥ ಎಳೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಕ್ಷೇತ್ರದ ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಈ ಬಾರಿ ಚಂಪಾಷಷ್ಠಿ ಮಹೋತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವಕ್ಕೂ ಕೊರೊನಾ ಕರಿಛಾಯೆ ಆವರಿಸಿದೆ. ಪ್ರತೀ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವದ ಜೊತೆಗೆ ಶಿವ-ಪಾರ್ವತಿಯರ ರಥೋತ್ಸವ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.ಈ ಧಾರ್ಮಿಕ ವಿಧಿ ವಿಧಾನದಲ್ಲಿ ಭಕ್ತರನ್ನೂ ಸೇರಿಸಿಕೊಳ್ಳುವ ಪದ್ಧತಿ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿತ್ತು. ಬ್ರಹ್ಮರಥ ಎಳೆಯುವುದು ಪುಣ್ಯದ ಕೆಲಸ ಎನ್ನುವ ನಂಬಿಕೆ ಕ್ಷೇತ್ರದಲ್ಲಿದ್ದು, ಈ ಕಾರಣಕ್ಕಾಗಿಯೇ ಮುಂಜಾನೆ ನಡೆಯುವ ಈ ರಥೋತ್ಸವದಲ್ಲಿ ರಥ ಎಳೆಯಲು ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರುತ್ತಾರೆ.ಕೋವಿಡ್ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸೇವೆಗಳನ್ನು ಕಡಿತಗೊಳಿಸುವುದಕ್ಕೆ ಭಕ್ತರ ಅಸಮಾಧಾನವಿಲ್ಲದಿದ್ದರೂ, ಬ್ರಹ್ಮರಥದ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವುದು ಭಕ್ತರ ನಿರಾಶೆಗೆ ಕಾರಣವಾಗಿದೆ.