(ನ್ಯೂಸ್ ಕಡಬ) newskadaba.com ಕಡಬ, ಅ.08. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿಯನ್ನು ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ದ.ಕ. ಜಿಲ್ಲಾಧಿಕಾರಿ ಕಟ್ಟಡ ತೆರವಿಗೆ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಆರು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ಅದರಂತೆ ಭಾನುವಾರದಂದು ಮದ್ಯದಂಗಡಿ ತೆರೆಯಲಾಗಿದೆ. ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಲವು ದಿನಗಳ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಗ್ರಾಮಸ್ಥರ ಒತ್ತಡಕ್ಕೆ ಮಣಿದ ದ.ಕ. ಜಿಲ್ಲಾಧಿಕಾರಿ ಜಗದೀಶ್ ಕೆ.ಜೆ.ಯವರು ಸರಕಾರಿ ಜಾಗದಲ್ಲಿನ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಕಟ್ಟಡ ಮಾಲೀಕರು ಹೈಕೋರ್ಟಿನ ಮೊರೆ ಹೋಗಿದ್ದು, ಹೈಕೋರ್ಟ್ ಜಿಲ್ಲಾಧಿಕಾರಿಯವರ ಆದೇಶಕ್ಕೆ ಆರು ವಾರಗಳ ತಡೆಯಾಜ್ಞೆ ನೀಡಿದೆ.