(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಇತ್ತೀಚೆಗೆ ನಗರದಲ್ಲಿ ದುಷ್ಕರ್ಮಿಗಳು ಲಷ್ಕರ್ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹಗಳನ್ನು ಬರೆದ ಘೋರ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈ ವಿಷಯ ತಿಳಿಸಿದರು.
ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಕ ರಸ್ತೆಯ ಗೋಡೆಯೊಂದರಲ್ಲಿ ಮೊದಲಿಗೆ ಉಗ್ರರ ಪರ ಬರಹ ಕಂಡು ಬಂದಿತ್ತು. ಆದರೆ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ತೋರಿದ್ದುದರಿಂದ ನಂತರ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಪೊಲೀಸ್ ಚೌಕಿಯ ಹಳೆ ಕಟ್ಟಡದ ಗೋಡೆಯಲ್ಲಿ ಪುನಃ ವಿವಾದಾತ್ಮಕ ಬರಹ ಕಂಡು ಬಂದಿದೆ. ಇವೆಲ್ಲಾ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಿ ಗಲಭೆ ಸೃಷ್ಟಿಸಲು ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಆಪಾದಿಸಿದರು.
ಪೊಲೀಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಕಾರಣದಿಂದಲೇ ಇಂತಹ ಘಟನೆಗಳು ಪುನಾರಾವರ್ತನೆಯಾಗುತ್ತಿವೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಯಾಕೆ ಬಂಧಿಸಿಲ್ಲ ಎಂಬುದು ಯಕ್ಷ ಪ್ರಶ್ನೆ ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಾಹುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ ಮುಂತಾದವರು ಉಪಸ್ಥಿತರಿದ್ದರು.