(ನ್ಯೂಸ್ ಕಡಬ) newskadaba.com ನಾಗ್ಪುರ,ಅ.02. ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಸರಣಿಯ ಕೊನೆಯ ಪಂದ್ಯವನ್ನು 7 ವಿಕೆಟ್ ಗಳಿಂದ ಭಾರತ ಗೆದ್ದುಕೊಂಡಿದ್ದು, ಈ ಮೂಲಕ ಟೀ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿಯನ್ನು ಜಯಗಳಿಸಿದೆ. ಭಾರತದ ಪಾಳಿಗೆ ಇದೇ ಮೊದಲ ಸರಣಿ ಗೆಲುವಾಗಿದೆ.
ಆದಿತ್ಯವಾರ ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಭಾರತ 42.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿ ಜಯಗಳಿಸಿದೆ.
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಮೊದಲ ವಿಕೆಟ್ ಗೆ 22.3 ಓವರ್ ಗಳಲ್ಲಿ 124 ರನ್ ಜೊತೆಯಾಟವಾಡಿದರು. ರಹಾನೆ 74 ಎಸೆತಕ್ಕೆ 61 ರನ್ (7 ಬೌಂಡರಿ) ಗಳಿಸಿ ಎಲ್‍ಬಿ ಬಲಿಯಾದರು. ನಂತರ ಬಂದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆಗೂಡಿ ಎರಡನೇ ವಿಕೆಟ್ ಗೆ 99 ರನ್ ಗಳ ಜೊತೆಯಾಟವಾಡಿದರು. ತಂಡದ ಮೊತ್ತ 223 ಆಗಿದ್ದಾಗ ಕೊಹ್ಲಿ 55 ಎಸೆತದಲ್ಲಿ 39 ರನ್ (2 ಬೌಂಡರಿ) ಗಳಿಸಿ ಕ್ಯಾಚ್ ನೀಡಿ ಔಟಾದರು.
94 ಎಸೆತದಲ್ಲಿ 14ನೇ ಶತಕ ಪೂರ್ಣಗೊಳಿಸಿದ ರೋಹಿತ್ ಶರ್ಮಾ 109 ಎಸೆತದಲ್ಲಿ 125 ರನ್(11 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಔಟಾದರು. ಕೇದಾರ್ ಜಾದವ್ ಅಜೇಯ 5 ರನ್, ಮನೀಷ್ ಪಾಂಡೆ ಅಜೇಯ 11ರನ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 62 ಎಸೆತಕ್ಕೆ 53 ರನ್(5 ಬೌಂಡರಿ), ಸ್ಟೊಯಿನ್ಸ್ 63 ಎಸೆತಕ್ಕೆ 46 ರನ್(4 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.
ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರೆ, ಬೂಮ್ರಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾದವ್ ತಲಾ ಒಂದೊಂದು ವಿಕೆಟ್ ಕಿತ್ತರು. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಈ ಸರಣಿಗೂ ಮುನ್ನ ಒಟ್ಟು 7 ಬಾರಿ ಭಾರತ-ಆಸೀಸ್ 5 ಅಥವಾ 5ಕ್ಕೂ ಹೆಚ್ಚು ಪಂದ್ಯಗಳ ಅಟವಾಡಿದ್ದು, ಇದರಲ್ಲಿ 2 ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 2 ಬಾರಿ 3-2 ಅಂತರದಿಂದ ಸೋಲಿಸಿತ್ತು. 1986ರಲ್ಲಿ ಮೊದಲ ಬಾರಿ ಹಾಗೂ 2013ರಲ್ಲಿ 2ನೇ ಬಾರಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
ನಂಬರ್ 1 ಪಟ್ಟ: ಪಂದ್ಯದಲ್ಲಿ ಭಾರತ ಗೆದ್ದ ಹಿನ್ನೆಲೆಯಲ್ಲಿ ಮತ್ತೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೆ ಏರಿದೆ. ಸೆಪ್ಟೆಂಬರ್ 24ರಂದು ಇಂದೋರ್ ನಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಂಬರ್ 1 ಪಟ್ಟಕ್ಕೇರಿತ್ತು. ಆದರೆ 4ನೇ ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ನಂ.2ಕ್ಕೆ ಇಳಿದಿತ್ತು. ಈ ಪಂದ್ಯಕ್ಕೂ ಮುನ್ನಾ ದಕ್ಷಿಣ ಆಫ್ರಿಕಾ 119 ಅಂಕಗಳ ಜೊತೆ ನಂ.1 ಸ್ಥಾನದಲ್ಲಿತ್ತು. ಸಮಾನವಾದ 119 ಅಂಕಗಳೊಂದಿಗೆ ಟೀಂ ಇಂಡಿಯಾ 2ನೇ ಸ್ಥಾನದಲ್ಲಿತ್ತು. ಆದರೆ ಆದಿತ್ಯವಾರದ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಭಾರತದ ಅಂಕ 120ಕ್ಕೆ ಏರಿಕೆಯಾಗಿದ್ದು, ಈ ಮೂಲಕ ಮತ್ತೆ ನಂಬರ್ 1 ಪಟ್ಟಕ್ಕೆ ಏರಿದೆ.