(ನ್ಯೂಸ್ ಕಡಬ) newskadaba.com ಮಂಗಳೂರು ಅ. 26: ಕೋವಿಡ್ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕೆಲಸ ಕಾರ್ಯಗಳು ಆರಂಭಗೊಂಡಿದೆ. ಆದರೆ ಶಾಲಾ ಕಾಲೇಜುಗಳ ಆರಂಭ ಕುರಿತು ಸಮಾಲೋಚನೆಗಳು ನಡೆಯುತ್ತಿದೆ. ಇದರ ನಡುವೆ ಮಂಗಳೂರು ವಿವಿ ಮಂಗಳೂರು ವಿಶ್ವವಿದ್ಯಾನಿಲಯವು ಡಿಸೆಂಬರ್ ಮೊದಲ ವಾರದಿಂದ ಸ್ನಾತಕೋತ್ತರ ತರಗತಿ ಆರಂಭಿಸುವ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ನವೆಂಬರ್ 17ರಿಂದ ಪದವಿ ಹಾಗೂ ಡಿಪ್ಲೊಮಾ ತರಗತಿಗಳು ಆರಂಭಕ್ಕೆ ರಾಜ್ಯ ಸರಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.ನವೆಂಬರ್ 15ರೊಳಗೆ ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ನಾತಕೋತ್ತರ ತರಗತಿಗಳ ಪ್ರವೇಶಾತಿಯನ್ನು ಆರಂಭಿಸಲಿದೆ. ಪ್ರವೇಶಾತಿ ಪ್ರಕ್ರಿಯೆ ಮುಗಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೊದಲ ವರ್ಷದ ಸ್ನಾತಕೋತ್ತರ ತರಗತಿ ಆರಂಭಿಸುವ ನಿರೀಕ್ಷೆ ಇದೆ.ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿ ಆಯ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರದ್ದಾಗಿರುತ್ತದೆ. ಸರಕಾರ, ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗಗಳ ನಿರ್ದೇಶನ ಹಾಗೂ ಸ್ಥಳೀಯವಾಗಿ ಕೋವಿಡ್ ಪ್ರಕರಣಗಳ ಸ್ಥಿತಿಗತಿ ಅವಲೋಕಿಸಿ ದಿನಾಂಕ ನಿರ್ಧರಿಸುವುದಾಗಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವವಿದ್ಯಾನಿಲಯದ ವೆಬ್‌ಸೈಟ್ mangaloreuniversity.ac.in/pg.admission-notification-academic-year-2020-21ನಲ್ಲಿ ಮಾಹಿತಿ ಮತ್ತು ಅರ್ಜಿ ಪಡೆಯಬಹುದಾಗಿದೆ.