(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.18: ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ವಂಚಕನೊಬ್ಬ ವೃದ್ದ ದಂಪತಿಯ ಚಿನ್ನದ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಆರೋಪಿಯನ್ನು ಅಕ್ಷಯ್ ಎಂದು ಗುರುತಿಸಲಾಗಿದೆ.
ರಾಜಾಜಿನಗರದ ನಿವಾಸಿ ಸೀತಾಪತಿ ಎಂಬುವವರ ಮನೆಗೆ ಬಂದ ಆರೋಪಿ ಅಕ್ಷಯ್, ತಮ್ಮ ಮನೆಯ ಗೃಹ ಪ್ರವೇಶವಿದೆ, ನಾನು ನಿಮ್ಮ ಎದುರು ಮನೆ ನಿವಾಸಿ ಗೃಹ ಪ್ರವೇಶಕ್ಕೆ ಬರಬೇಕು ಎಂದು ಸೀತಾಪತಿ ಹಾಗೂ ಅವರ ಪತ್ನಿ ಕೈಗೆ ಆಮಂತ್ರಣ ಪತ್ರಿಕೆ ಜೊತೆ ಒಂದು ಬೆಳ್ಳಿ ನಾಣ್ಯದ ಮಾದರಿಯ ವಸ್ತು ನೀಡಿದ್ದಾನೆ. ಅಲ್ಲದೇ ಗೃಹ ಪ್ರವೇಶಕ್ಕೆ ಬಂದಾಗ ಚಿನ್ನದ ಡಾಲರ್ ನೀಡುವುದಾಗಿ ಹೇಳಿದ್ದನು. ಇದೇ ವೇಳೆ ಮನೆಗೆ ಅಡಿಗೆ ಸಿಲೀಂಡರ್ ವ್ಯಕ್ತಿ ಬಂದಿದ್ದ. ಆತನಿಗೆ ಹಣ ಕೊಡಬೇಕು ಎಂದು ಸೀತಾಪತಿ ಮನೆ ಒಳಗಡೆ ಹೋಗುತ್ತಿದ್ದಂತೆಯೇ ಆರೋಪಿ ಅಕ್ಷಯ್ ಸೀತಾಪತಿ ಪತ್ನಿಯ ಬಳಿಯಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಪೊಲೀಸರು ಆರೋಪಿಗಾಗಿ ಇದೀಗ ಬಲೆ ಬೀಸಿದ್ದಾರೆ.