(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಸೆ.25. ಪುಷ್ಟಿದಾಯಕ ಆಹಾರಗಳಲ್ಲೊಂದಾದ ಸಿಹಿ ಗೆಣಸು ಯಾರಿಗೆ ತಾನೆ ಹಿಡಿಸಲ್ಲ… ಎಲ್ಲಾರಿಗೂ ಇಷ್ಟ ಅಲ್ಲವೇ?…. ಹೌದು ಸಿಹಿಗೆಣಸಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಇದರಿಂದ ಪಾಯಸ ಕೂಡ ತಯಾರಿಸಬಹುದು.
ಸಿಹಿಗೆಣಸಿನ ಪಾಯಸ ಹೇಗೆ ಮಾಡುವುದು ಅನ್ನೋ ಸರಳವಾದ ವಿಧಾನವನ್ನು ಕೆಳಗೆ ತಿಳಿಸಲಾಗಿದೆ..
ಬೇಕಾಗುವ ಸಾಮಾಗ್ರಿಗಳು:
· ಸಿಹಿಗೆಣಸು – ಕತ್ತರಿಸಿಕೊಂಡದ್ದು 1 ಬಟ್ಟಲು
· ತೆಂಗಿನ ಹಾಲು – 1 ಬಟ್ಟಲು
· ಬೆಲ್ಲ – ಸಿಹಿಗೆ ತಕ್ಕಷ್ಟು
· ಏಲಕ್ಕಿ – 2 ಚಿಟಿಕೆ
· ತುಪ್ಪ- 1 ಬಟ್ಟಲು
· ಉಪ್ಪು – ಚಿಟಿಕೆ
· ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
· ಮೊದಲು ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಚ್ಚಿದ ಗೆಣಸು, ಸ್ವಲ್ಪ ನೀರು, ಹಾಗೂ ಚಿಟಿಕೆ ಉಪ್ಪು ಹಾಕಿ ಗೆಣಸನ್ನು ಬೇಯಿಸಿಕೊಳ್ಳಿ.
· ಬಳಿಕ ಬೇರೆ ಪಾತ್ರೆಯಲ್ಲಿ ತೆಂಗಿನ ಹಾಲು ಹಾಕಿ ಕುದಿಯಲು ಇಡಿ. ನಂತರ ತೆಂಗಿನ ಹಾಲಿಗೆ ಬೆಲ್ಲವನ್ನು ಹಾಕಿ ಬೆಲ್ಲ ಕರಗಲು ಬಿಡಬೇಕು.
· ಬೆಲ್ಲ ಕರಗಿದ ಬಳಿಕ ಚೆನ್ನಾಗಿ ಕುದಿಬಂದ ತೆಂಗಿನ ಹಾಲಿಗೆ ಬೆಂದ ಗೆಣಸನ್ನು ಸೇರಿಸಿ 5-10 ನಿಮಿಷ ಕುದಿಯಲು ಬಿಡಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿ, ಬಳಿಕ ಏಲಕ್ಕಿ ಪುಡಿಯನ್ನು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರವಾದ ಸಿಹಿಗೆಣಸಿನ ಪಾಯಸ ಸವಿಯಲು ಸಿದ್ಧ.