(ನ್ಯೂಸ್ ಕಡಬ) newskadaba.com ಕಡಬ, ಅ. 14. ಕೋವಿಡ್ 19 ನಿಂದಾಗಿ ಸಂಭವಿಸಿದ ಕೆಡುಕಿನ ಪ್ರಮಾಣಕ್ಕಿಂತ ಒಳಿತುಗಳೇ ಹೆಚ್ಚು ಎಂದರೆ ಈ ಸಂದರ್ಭದಲ್ಲಿ ತಪ್ಪಾಗಲಿಕ್ಕಿಲ್ಲ. ಹೌದು, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಅಂತರ್ ರಾಜ್ಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ಸಮ್ಯಕ್ತ್. ಜೈನ್ ಇದಕ್ಕೆ ಪ್ರತ್ಯಕ್ಷ ಸಾಕ್ಷಿ .
ಇದುವರೆಗೆ ಮೂರು ಕವನಸಂಕಲನವನ್ನು ಬರೆದು, ಪ್ರಕಟಗೊಳಿಸಿ ಸಾಹಿತ್ಯಿಕ ಚಟುವಟಿಕೆಯಲ್ಲಿ ತಲ್ಲೀನರಾಗಿರುವ ಸಮ್ಯಕ್ತ್ .ಜೈನ್ ರವರಿಗೆ ಇದೀಗ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇತ್ತೀಚೆಗೆ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕೃತಿಗಳ ಪರಿಚಯ ಸ್ಪರ್ಧೆ 2020 ನ್ನು ಆಯೋಜಿಸಿತ್ತು. ಇದರಲ್ಲಿ ರಾಧೇಶ್ ತೋಳ್ಪಾಡಿರವರು ಬರೆದ ಮಕ್ಕಳ ಕವಿತೆಯ ಕೃತಿಯೊಂದನ್ನು ಪರಿಚಯಿಸಿದ ಇವರು ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿ – ಪುರಸ್ಕಾರವನ್ನು ಪಡೆದಿರುತ್ತಾರೆ.
ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರರಾಗಿರುವ ಇವರು ಕವಿ, ಲೇಖಕ, ನಾಟಕ ರಚನೆಗಾರ, ಯುವ ಚಿಂತಕ, ನಿರೂಪಕ ಹಾಗೂ ವಾಗ್ಮಿಯಾಗಿ ಚಿರಪರಿಚಿತಗೊಂಡಿದ್ದು, ತನ್ನ ಸಾಧನೆಯೊಂದಿಗೆ ಊರಿನ ಹೆಸರನ್ನೂ ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ.