“ಮುಖ ಮುಚ್ಚಿಕೊಳ್ಳಿ ಇಲ್ಲವಾದರೆ ದೇಹವನ್ನೇ ಮುಚ್ಚಬೇಕಾದೀತು” ➤ ಡಾ: ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 12: ವಿಶ್ವವನ್ನು ಕಾಡುತ್ತಿರುವ ಕೋರೋನಾ ಎಂಬ ಮಹಾಮಾರಿ ಕೊನೆಯಾಗುವ ಲಕ್ಷಣಗಳು ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಜನತೆ ಮುಂಜಾಗ್ರತೆ ವಹಿಸುವುದರಿಂದ ಮಾತ್ರ ಕೋರೋನಾದಿಂದ ಬಚಾವಾಗಲು ಸಾಧ್ಯ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕೋರೋನಾ ಜಾಗೃತಿಯ ವಿನೂತನ ಪ್ರಯತ್ನ ಮಾಡಿದ್ದು, ಅದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ನೇತೃತ್ವದಲ್ಲಿ ‘ಮುಖ ಮುಚ್ಚಿಕೊಳ್ಳಿ ಇಲ್ಲವಾದರೆ ದೇಹವನ್ನೇ ಮುಚ್ಚಬೇಕಾದೀತು” ಎಂಬ ಅರ್ಥವತ್ತಾದ ಶೀರ್ಷಿಕೆಯಡಿ ಕಿರುಚಿತ್ರವೊಂದನ್ನು ತಯಾರಿಸಲಾಗಿದ್ದು, ಯೂಟ್ಯೂಬ್, ವಾಟ್ಸಾಪ್ ಮೂಲಕ ಸಾರ್ವಜನಿಕರನ್ನು ತಲುಪುತ್ತಿರುವ ಈ ಕಿರುಚಿತ್ರ ಜಾಗೃತಿ ಮೂಡಿಸುವಲ್ಲಿ ಯಶಸ್ಸು ಕಾಣುತ್ತಿದೆ.

ಮನೆಯಿಂದ ಹೊರ ಹೋಗುವಾಗ ಮಾಸ್ಕ್‍ನ್ನು ಕಡ್ಡಾಯವಾಗಿ ಬಳಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಕೊರೋನಾ ನಮ್ಮನ್ನು ಆವರಿಸಿಬಿಡುತ್ತದೆ ಎಂಬ ಸಂದೇಶ ಈ ಪುಟ್ಟ ವಿಡಿಯೋದಲ್ಲಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಸಾವು ನಿಶ್ಚಿತ ಎಂಬುದನ್ನು ಬೊಟ್ಟು ಮಾಡಲಾಗಿದೆ. ಮಂಜೇಶ್ವರದ ಖ್ಯಾತ ವೈದ್ಯ, ಸಾಹಿತಿ ಡಾ: ರಮಾನಂದ ಬನಾರಿ ಅವರು ಬರೆದಿರುವ ‘ಬಂದಿದೆ ಕೊರೋನಾ … ಇರಲಿ ಜೀಪಾನ” ಎಂಬ ಜಾಗೃತಿ ಹಾಡನ್ನು ಕಿರುಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಮಾಜಕ್ಕೆ ಕೊರೋನಾ ಜಾಗೃತಿಯ ಸಂದೇಶ ಸಾರಿರುವ ಈ ಚಿತ್ರದಲ್ಲಿ ಮಂಗಳೂರಿನ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ನಿಧಿ, ಸಿವಿಲ್ ಡಿಫೆನ್ಸ್‍ನ 20 ಮಂದಿ ಕಾರ್ಯಕರ್ತರು, ಗೃಹರಕ್ಷಕ ದಳದ 10 ಮಂದಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಮಂಗಳೂರು ಅರ್ಪಿಸುವ ಈ ಕಿರುಚಿತ್ರಕ್ಕೆ ಸ್ವತ: ಡಾ: ಮುರಲೀಮೋಹನ್ ಚೂಂತಾರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Also Read  ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ - ಸವಾರನಿಗೆ ಗಾಯ

ಕಿರುಚಿತ್ರಕ್ಕೆ ಡಾ: ನಿತಿನ್ ಆಚಾರ್ಯ, ಸಂಗೀತ ನೀಡಿದ್ದು, ವಿದ್ಯಾಧರ ಶೆಟ್ಟಿ, ನೇತೃತ್ವದ ಪೊಸಕುರಲ್ ತಂಡ ಫೋಟೋಗ್ರಫಿ ನಿರ್ವಹಿಸಿದೆ. ಜಾಗೃತಿಯ ಈ ಕಿರುಚಿತ್ರದಕ್ಕೆ ನಿತಿನ್ ಸುವರ್ಣ, ಸಂತೋಷ್ ಪೀಟರ್, ಕುಮಾರಿ ನಿಧಿ, ಅಂಜನ್ ತಂಡ ಸಹಕಾರ ನೀಡಿದೆ. ಕೋರೋನಾ ಭೀತಿಯ ಈ ಸಂದರ್ಭ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಾದ್ದು ಅವಶ್ಯ. ಇಲಾಖೆಯ ಹಿರಿಯ ಅಧಿಕಾರಿಗಳಿಂದ ತಮಗೆ ಬಂದ ಸೂಚನೆಯಂತೆ ಹೊಸ ರೀತಿಯಲ್ಲಿ ಜಾಗೃತಿ ಮೂಡಿಸಲು ಯೋಚಿಸಿದಾಗ ಈ ಕಿರುಚಿತ್ರದ ಕಲ್ಪನೆ ಬಂತು, ಕಿರುಚಿತ್ರದ ಮೂಲಕ ಸಾವಿರಾರು ಮಂದಿಯನ್ನು ತಲುಪಲು ಸಾಧ್ಯವಿದೆ ಎಂದು ಜಿಲ್ಲಾ ಸಮಾದೇಷ್ಟರಾದ ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.

Also Read  ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ

error: Content is protected !!
Scroll to Top