(ನ್ಯೂಸ್ ಕಡಬ) newskadaba.com ಉಡುಪಿ , ಸೆ. 25: ಲಾಕ್‌ಡೌನ್ ಅವಧಿಯಲ್ಲಿ 300 ಮಾಸ್ಕ್‌ಗಳನ್ನು ಹೊಲಿದು ಯೋಧರಿಗೆ ಕಳುಹಿಸಿಕೊಟ್ಟಿದ್ದ ಉಡುಪಿಯ ಇಶಿತಾ ಆಚಾರ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನಾ ಪತ್ರ ಕಳುಹಿಸಿದ್ದಾರೆ. ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ಆಚಾರ್ ರಕ್ಷಣಾ ಸಚಿವರ ಅಭಿನಂದನೆಗೆ ಪಾತ್ರವಾಗಿರುವ ವಿದ್ಯಾರ್ಥಿನಿ.
‘ಸೈನಿಕರಿಗೆ ಮಾಸ್ಕ್ ಹೊಲಿದು ಕಳುಹಿಸಿದ್ದಕ್ಕೆ ಧನ್ಯವಾದಗಳು. ಯೋಧರ ಮೇಲಿರುವ ಆಕೆಯ ಕಾಳಜಿ ಹಾಗೂ ಕೋವಿಡ್-19 ಸೋಂಕು ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರಯತ್ನ ಅಭಿನಂದನೀಯ’ ಎಂದು ರಾಜನಾಥ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೇಶ ಕಾಯುವ ಸೈನಿಕರಿಗೆ ಕಳುಹಿಸಲು ನಿರ್ಧರಿಸಿದ ಇಶಿತ, ರಕ್ಷಣಾ ಸಚಿವರ ವಿಳಾಸ ಪಡೆದು ಕೊರಿಯರ್ ಮಾಡಿದ್ದಳು. ಒಂದೂವರೆ ತಿಂಗಳ ಬಳಿಕ ರಾಜನಾಥ್ ಸಿಂಗ್ ಅವರಿಂದ ಅಭಿನಂದನಾ ಪತ್ರ ಬಂದಿದೆ ಎಂದು ಇಶಿತಾ ಅವರ ತಾಯಿ ನಂದಿತಾ ಆಚಾರ್ ಮಾಹಿತಿ ನೀಡಿದರು. ಮಗಳ ಸಮಾಜಪರ ಕಾರ್ಯಕ್ಕೆ ಖುದ್ದು ರಕ್ಷಣಾ ಸಚಿವರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿರುವುದು ಖುಷಿ ತಂದಿದೆ ಎಂದರು.