ಮಂಗಳೂರಿಗೆ ಮತ್ತೊಂದು ಗರಿ ➤ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ. 22: ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲೇ ಸ್ಥಾಪನೆಯಾಗುವುದು ಖಚಿತಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರ ದೃಢವಾಗಿ ಮೊದಲ ಹೆಜ್ಜೆ ಇರಿಸಿದ್ದು, ಮಂಗಳೂರಿನ ಕೆಂಜಾರಿನಲ್ಲಿ 158 ಎಕರೆ ಭೂಮಿಯನ್ನು ಅಕಾಡೆಮಿ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಿದೆ.

ಭಾರತೀಯ ತಟರಕ್ಷಣಾ ಪಡೆಯ ತರಬೇತಿ ಅಕಾಡೆಮಿ (ಐಸಿಜಿಎ)ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸಕ್ತಿ ವಹಿಸಿದ್ದು, ಶೀಘ್ರ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಲಿರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಈ ಮೂಲಕ, ಕೇರಳದ ಕಣ್ಣೂರು ಜಿಲ್ಲೆಯ ಆಯಿಕಲ್ ಸಮೀಪದ ಇರಿನಾವು ಸಮುದ್ರ ತೀರದ ವಳಪಟ್ಟಣಂ ನದಿ ಬಳಿ ಸ್ಥಾಪನೆಯಾಗಬೇಕಿದ್ದ ತರಬೇತಿ ಅಕಾಡೆಮಿ ರಾಜ್ಯಕ್ಕೆ ದಕ್ಕಿದಂತಾಗಿದೆ. ಐಸಿಜಿಎ ಸ್ಥಾಪನೆ ಸುಮಾರು 1,010 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಕರಾವಳಿಯಲ್ಲಿ ಅಕಾಡೆಮಿಗೆ ಪೂರಕವಾದ ಭೌಗೋಳಿಕ ಲಕ್ಷಣಗಳಿರುವುದು ಮತ್ತು ನಗರದ ಪಣಂಬೂರಿನಲ್ಲಿ ಕೋಸ್ಟ್‌ಗಾರ್ಡ್‌ನ ಮೂರನೇ ಜಿಲ್ಲಾ ಪ್ರಧಾನ ಕಚೇರಿ ಇರುವುದು ಹೆಚ್ಚಿನ ಅನುಕೂಲವಾಗಲಿದೆ.

Also Read  ಬ್ರಹ್ಮಾವರ :ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ.!?

error: Content is protected !!
Scroll to Top