ನನೆಗುದಿಗೆ ಬಿದ್ದಿರುವ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತಾವನೆ

ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.07. ತಾಲೂಕು ಕೇಂದ್ರವಾಗಿ ಗುರುತಿಸಲ್ಪಟ್ಟಿರುವ ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ ಹಲವು ವರ್ಷಗಳೇ ಸಂದಿವೆ. ಆ ಸಮಯದಲ್ಲಿಯೇ ಹತ್ತಿರದ ಮರ್ದಾಳದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಆರಂಭಿಸುವ ಪ್ರಸ್ತಾವನೆ ಸರಕಾರ ಮುಂದಿತ್ತು. ಅದಕ್ಕಾಗಿ ಪ್ರಾಥಮಿಕ ಕೆಲಸ ಕಾರ್ಯಗಳು ಕೂಡ ನಡೆದಿತ್ತು. ಆದರೆ ಕಂದಾಯ ಇಲಾಖೆ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ಸಂಬಂಧಪಟ್ಟವರು ಈ ಕುರಿತು ಮುತುವರ್ಜಿ ವಹಿಸುವ ಅಗತ್ಯವಿದೆ.

ಮರ್ದಾಳ ಪೇಟೆಯ ಸಮೀಪ ಐತ್ತೂರು ಗ್ರಾ.ಪಂ.ವ್ಯಾಪ್ತಿಯ ಶಿವಾಜಿನಗರದ ಸರ್ವೆ ನಂ.176ಪಿ(6) ರಲ್ಲಿ ಆರೋಗ್ಯ ಇಲಾಖೆಗೆ 35 ಸೆಂಟ್ಸ್‌ ಜಮೀನು ಇದೆ. ಅಲ್ಲಿ ಬಂಟ್ರ ಆರೋಗ್ಯ ಉಪ ಕೇಂದ್ರವೂ ಇದೆ. ಅದೇ ಜಮೀನಿಗೆ ಹೊಂದಿಕೊಂಡಂತೆ ಸುಮಾರು 3 ಎಕರೆ ಸರಕಾರಿ ಜಮೀನು ಲಭ್ಯವಿದೆ. ಅದನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾದಿರಿಸುವಂತೆ ಐತ್ತೂರು ಗ್ರಾ.ಪಂ.ಹಲವಾರು ಬಾರಿ ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಂದಾಯ ಇಲಾಖಾಧಿಕಾರಿಗಳ ಸ್ಪಂದನೆ ಇಲ್ಲದೇ ಇದ್ದುದರಿಂದಾಗಿ 2010ರಲ್ಲಿ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಸರಕಾರದ ಮುಂದಿದ್ದ ಪ್ರಸ್ತಾವನೆ ಬಿದ್ದುಹೋಗಿದೆ. ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಸ್ತುತ ಸಮುದಾಯ ಆಸ್ಪತ್ರೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಟುವಟಿಕೆಗಳು ಕಡಬ ಸಮುದಾಯ ಆಸ್ಪತ್ರೆಯಿಂದ ಬೇರ್ಪಡಲಿವೆ. ಆ ಸಂದರ್ಭದಲ್ಲಿ ಹತ್ತಿರದ ಯಾವುದಾದರೂ ಗ್ರಾಮದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವುದು ಅನಿವಾರ್ಯ. ಇಲ್ಲದೇ ಹೋದರೆ ಈಗ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಗ್ರಾಮಗಳು ಹಾಗೂ ಉಪ ಕೇಂದ್ರಗಳನ್ನು ನೆರೆಯ ಪಂಜ, ನೆಲ್ಯಾಡಿ, ಕೊೖಲ ಹಾಗೂ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಿ ಸೇರ್ಪಡೆಗೊಳಿಸಬೇಕಾಗುತ್ತದೆ. ಅದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಬೇಕಾಗಬಹುದು. ಆದುದರಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮರ್ದಾಳ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಸ್ತಾವನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕಡಬಕ್ಕೆ ಸುಲಭ ಸಂಪರ್ಕದಲ್ಲಿರುವ ಐತ್ತೂರು, ಕೊಣಾಜೆ, ಬಿಳಿನೆಲೆ, ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳು ಪ್ರಸ್ತುತ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದೆ. ಆ ಗ್ರಾಮಗಳನ್ನು ಶಿರಾಡಿಯಿಂದ ಬೇರ್ಪಡಿಸಿ ಕಡಬದ ವ್ಯಾಪ್ತಿಗೆ ಸೇರಿಸಬೇಕೆಂದು ಸಂಬಂಧಪಟ್ಟ ಗ್ರಾ.ಪಂ.ಗಳು ಹಲವು ಬಾರಿ ನಿರ್ಣಯ ಆಂಗೀಕರಿಸಿ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿವೆ. ಹೊಸದಾಗಿ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ರಚನೆಯಾದರೆ ಅಲ್ಲಿಗೆ ಈ ಗ್ರಾಮಗಳನ್ನು ಸೇರ್ಪಡೆಗೊಳಿಸಬಹುದು. ಅದರಿಂದ ಅಲ್ಲಿನ ಜನರಿಗೂ ಅನುಕೂಲವಾಗಲಿದೆ.

ಸೇರ್ಪಡೆಗೊಳಿಸಬಹುದಾದ ಗ್ರಾಮಗಳು
ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರುಪ್ಪಾಡಿ, ಬಲ್ಯ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಗಳೊಂದಿಗೆ ನೆರೆಯ ಗ್ರಾಮಗಳಾದ ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಬಿಳಿನೆಲೆ ಮುಂತಾದ ಗ್ರಾಮಗಳನ್ನು ಪ್ರಸ್ತಾಪಿತ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸಬಹುದಾಗಿದೆ.

ಈ ಹಿಂದೆ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ರಚಿಸುವ ಪ್ರಸ್ತಾವನೆ ಇತ್ತು. ಆದರೆ ಜಮೀನಿನ ಕೊರತೆಯಿಂದಾಗಿ ಅದು ಕಾರ್ಯಗತವಾಗಿಲ್ಲ. ಮುಂದಿನ ದಿನಗಳಲ್ಲಿ ಕಡಬ ಸಮುದಾಯ ಆಸ್ಪತ್ರೆಯ ವ್ಯಾಪ್ತಿಯ ಗ್ರಾಮಗಳಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಸಾಧ್ಯತೆಗಳಿವೆ. ಜನಪ್ರತಿನಿಧಿಗಳಿಂದ ಈ ಕುರಿತು ಮನವಿ ಬಂದಿದೆ. ಮರ್ದಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
ಡಾ|ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಗಳೂರು

ಕಡಬ ಜಿ.ಪಂ.ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೂ ಕೇಂದ್ರಸ್ಥಾನದಲ್ಲಿರುವ ಮರ್ದಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಗೊಂಡರೆ ಉತ್ತಮ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಮಾತುಕತೆ ನಡೆಸಲಾಗಿದ್ದು, ಶೀಘ್ರ ಆರೋಗ್ಯ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು.
ಪಿ.ಪಿ.ವರ್ಗೀಸ್, ಸದಸ್ಯ, ಕಡಬ ಜಿ.ಪಂ.ಕ್ಷೇತ್ರ

ಈ ಹಿಂದೆ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಬಂದಾಗ ಮರ್ದಾಳ ಪೇಟೆಗೆ ಹತ್ತಿರದಲ್ಲಿರುವ ಐತ್ತೂರು ಗ್ರಾ.ಪಂ.ವ್ಯಾಪ್ತಿಯ 2 ಎಕರೆ ಸರಕಾರಿ ಜಮೀನನ್ನು ಆರೋಗ್ಯ ಇಲಾಖೆಗೆ ನೀಡುವಂತೆ ನಾವು ನಿರ್ಣಯ ಆಂಗೀಕರಿಸಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಆದರೆ ಜಮೀನು ನೀಡಲು ಕಂದಾಯ ಇಲಾಖೆ ತಡ ಮಾಡಿದ್ದರಿಂದ ಅವಕಾಶ ಕೈತಪ್ಪಿತು. ಇದೀಗ ಮತ್ತೆ ಈ ಬಗ್ಗೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುವುದು.
ಸತೀಶ್ ಕೆ., ಅಧ್ಯಕ್ಷರು, ಐತ್ತೂರು ಗ್ರಾ.ಪಂ.

error: Content is protected !!

Join the Group

Join WhatsApp Group