(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.15. ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ, ಅತ್ಯಾಚಾರಗೈದು ಕೊಲೆ ಮಾಡುತ್ತಿದ್ದ ಸರಣಿ ಹಂತಕ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್(54) ಮೇಲಿನ ನಾಲ್ಕನೆ ಪ್ರಕರಣವೂ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಗರದ 6 ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ನೀಡಿದೆ.
2004 ರಿಂದ 2009 ರ ಅವಧಿಯಲ್ಲಿ ಒಟ್ಟು 20 ಸ್ತ್ರೀಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಮೋಹನ್ ಕುಮಾರ್ ಮೇಲಿದೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದ್ದು, ಮರಣ ದಂಡನೆ ವಿಧಿಸಲಾಗಿದೆ.
ನಾಲ್ಕನೆ ಪ್ರಕರಣದಲ್ಲಿ ಪುತ್ತೂರು ತಾಲೂಕಿನ ಪಟ್ಟೆಮಜಲು ನಿವಾಸಿ 22 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮೋಹನ್ ಕುಮಾರ್‌ನನ್ನು ದೋಷಿಯೆಂದು ಬುಧವಾರ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಐಪಿಸಿ ಸೆಕ್ಷನ್ 302 ಕೊಲೆ ಪ್ರಕರಣದಲ್ಲಿ ಜೀವಾವಧಿ 5 ಸಾವಿರ ರೂ. ದಂಡ, ಐಪಿಸಿ ಸೆಕ್ಷನ್ 376 ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, 366 ಅಪಹರಣ ಪ್ರಕರಣದಲ್ಲಿ 6 ವರ್ಷ ಕಠಿಣ ಶಿಕ್ಷೆ 4 ಸಾವಿರ ರೂ. ದಂಡ, 328 ವಿಷ ಉಣಿಸಿದ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, 201 ಸಾಕ್ಷಿ ನಾಶ ಆರೋಪದಲ್ಲಿ 5 ವರ್ಷ ಶಿಕ್ಷೆ 3 ಸಾವಿರ ರೂ. ದಂಡ, 392 ಆಭರಣ ದೋಚಿದ ಪ್ರಕರಣದಲ್ಲಿ 5 ವರ್ಷ ಕಠಿಣ ಸಜೆ 4 ಸಾವಿರ ದಂಡ ರೂ. ವಿಧಿಸಿದೆ.
ಈ ಎಲ್ಲಾ ಪ್ರಕರಣದಲ್ಲೂ ದಂಡ ತೆರಲು ತಪ್ಪಿದಲ್ಲಿ ತಲಾ 2 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ. ಐಪಿಸಿ 417 ಮೋಸ ಪ್ರಕರಣದಲ್ಲಿ 6 ತಿಂಗಳು ಸಜೆ ವಿಧಿಸಿದೆ. ಅಪರಾಧಿ ಈ ಎಲ್ಲಾ ಪ್ರಕರಣಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ ಎಂದು ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ತೀರ್ಪು ನೀಡಿದ್ದಾರೆ.