(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಆ.13: ಬಿಳಿನೆಲೆ ಪೇಟೆಯಲ್ಲಿ ನಿರ್ಮಿಸಲಾದ ಅಕ್ರಮ ಶೆಡ್ ನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾರಂಬಿಸಿದ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಶೆಡ್ ತೆರವಿಗಾಗಿ ಕಳೆದ ಕೆಲ ದಿನಗಳಿಂದ ಮುಸುಕಿನ ಗುದ್ದಾಟ ನಡೆಸುತ್ತಿರುವ ಅಂಗಡಿ ಮಾಲಕರು ಶೆಡ್ ತೆರವುಗೊಳಿಸುವಲ್ಲಿವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಹಾಗೂ ಯಾವುದೇ ಅನಾಹುತಗಳು ನಡೆದಲ್ಲಿ ಅಧಿಕಾರಿಗಳೇ ಹೊಣೆ ಎಂದು ಸತ್ಯಾಗ್ರಹ ನಿರತರು ತಿಳಿಸಿದ್ದಾರೆ.
ಅನ್ನಪೂರ್ಣ ಹಾಗೂ ಅವರ ಪತಿ ಗಿರಿಯಪ್ಪ, ಮಕ್ಕಳಾದ ಚೇತನ್ , ಚೇತಕ್ ಅವರು ಬಿಳಿನೆಲೆ ಗ್ರಾಮ ಪಂಚಾಯತ್ ಜಗಲಿಯಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾದವರು. ಇಂದು ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಪ್ರತಿಭಟನೆ ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇವರಿಗೆ ಗ್ರಾಮದ ಪ್ರಮುಖರಾದ ಸುಧೀರ್ ಕುಮಾರ್, ಶಾರದಾ ದಿನೇಶ್ ಸೇರಿದಂತೆ ಹಲವು ಮಂದಿ ಬೆಂಬಲ ಸೂಚಿಸಿ ಸ್ಥಳದಲ್ಲಿ ಹಾಜರಿದ್ದಾರೆ.