(ನ್ಯೂಸ್ ಕಡಬ) newskadaba.com ಉಡುಪಿ: ಜು.25, ಕೊರೋನಾ ಸೋಂಕಿನಿಂದ ಯಾರಾದರು ಮೃತಪಟ್ಟರೆ, ಅವರ ಕುಟುಂಬದ ಸದಸ್ಯರೇ ಮೃತದೇಹವನ್ನ ಮುಟ್ಟಲು ಹಿಂಜರಿಯುವ ಈಗಿನ ಪರಿಸ್ಥಿತಿಯಲ್ಲಿ, ಉಡುಪಿಯ ನಿತ್ಯಾನಂದ ಒಳಕಾಡು ಎಂಬವರು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ.
ಉಡುಪಿ ನಾಗರಿಕ ಸಮಿತಿಯ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಇವರು, ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ 30ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅವರ ಕಾರ್ಯಕ್ಕೆ ಸಮಿತಿಯ ತಾರಾನಾಥ ಮೇಸ್ತ ಕೂಡ ಜತೆಯಾಗಿದ್ದಾರೆ.
ವಾರಸುದಾರರು ಪತ್ತೆಯಾಗದೆ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಉಳಿಯುವ ಶವಗಳು ಹಾಗೂ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ರಸ್ತೆ ಬದಿ, ನಿರ್ಜನ ಪ್ರದೇಶಗಳಲ್ಲಿ ಅಸುನೀಗುವ ನಿರ್ಗತಿಕರ, ಭಿಕ್ಷುಕರ ಮೃತದೇಹಗಳಿಗೂ ನಿತ್ಯಾನಂದ ಒಳಕಾಡು ಮುಕ್ತಿ ನೀಡುತ್ತಾರೆ. ಜತೆಗೆ, ನಗರದ ಕೆಲವು ಕಡೆ ನೇಣು ಹಾಕಿಕೊಂಡು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುವ ಶವಗಳು ಹಾಗೂ ಮಕ್ಕಳಿಂದ ದೂರವಾಗಿ ಒಂಟಿ ಜೀವನ ಸಾಗಿಸುತ್ತಲೇ ಕೊನೆಯುಸಿರೆಳೆಯುವ ವೃದ್ಧರ ಅಂತ್ಯಕ್ರಿಯೆಯನ್ನೂ ಕೂಡಾ ಇವರೇ ಮುಂದೆ ನಿಂತು ಮಾಡಿ ಮುಗಿಸುತ್ತಾರೆ.
ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದರೆ, ವಾರಸುದಾರರು ಪತ್ತೆಯಾಗದ ಶವಗಳು ಸಿಕ್ಕರೆ ಮೊಬೈಲ್‌ಗೆ ಕರೆ ಬರುತ್ತದೆ. ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗೆ ದಾಖಲಿಸುವುದು ಹಾಗೂ ಅಪರಿಚಿತ ಶವಗಳಾದರೆ ಅಂತ್ಯಕ್ರಿಯೆ ನಡೆಸುವುದು ನಿತ್ಯದ ಕಾಯಕವಾಗಿದ್ದು, ದಶಕಗಳಿಂದ ಮಾಡಿಕೊಂಡು ಬರುತ್ತಿದ್ದೇನೆ ಎಂದರು. ಅಂತ್ಯಕ್ರಿಯೆ ಮಾಡಿದ್ದಕ್ಕೆ ಸರ್ಕಾರದಿಂದ ಹಣ ಸಿಗುವುದಿಲ್ಲ. ಪರಿಚಿತರು ಕೊಡುವ ಅಲ್ಪಸ್ವಲ್ಪ ಹಣದಿಂದ ಜೀವನ ನಡೆಯುತ್ತಿದೆ. ಒಂಟಿಯಾಗಿರುವುದರಿಂದ ಹೆಚ್ಚು ಖರ್ಚಿನ ಅಗತ್ಯವಿಲ್ಲ ಎಂದರು.