(ನ್ಯೂಸ್ ಕಡಬ)newskadaba.com ಮಂಗಳೂರು: ಜು.16, ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಮತ್ತು ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ದಾರೆ.
ತಮ್ಮ ಕಛೇರಿಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಆಭರಣಗಳ ರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮುಖ್ಯವಾಗಿ ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತಾ ದೃಷ್ಟಿಯಿಂದ ಎಲ್ಲಾ ದೇವಾಲಯಗಳ ಆಡಳಿತ ವರ್ಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ದೇವಸ್ಥಾನಗಳಲ್ಲಿ ಒಂದೇ ಬಾಗಿಲಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಅಲಾರ್ಮ್ (ಗಂಟೆ) ಅಳವಡಿಸಿ ಅವುಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಬೇಕು. ಈ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.