ಡಾ| ಮುರಲೀ ಮೋಹನ್ ಚೂಂತಾರು ರವರ ಸಂಕಲ್ಪ -2020 ಒಂದು ಮೌಲಿಕ ಕೃತಿಯಾಗಿದೆ ➤ಡಾ|| ರಮಾನಂದ ಬನಾರಿ ಶ್ಲಾಘನೆ

ಸಂಕಲ್ಪ-2020 (ಕೋವಿಡ್-19 ಆರೋಗ್ಯ ಮಾರ್ಗದರ್ಶಿ) ಎನ್ನುವ ಕೃತಿ ಶೀರ್ಷಿಕೆಯನ್ನು ಅರ್ಥವತ್ತಾಗಿಸಿಕೊಂಡು ಅತ್ಯುತ್ತಮವಾಗಿ ಮೂಡಿ ಬಂದಿದೆ. ಕೊರೋನಾ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸಮಗ್ರವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಔಚಿತ್ಯ ಪ್ರಜ್ಞೆಯೊಂದಿಗೆ ಹೇಗೆ ಬೇಕೋ ಹಾಗೆ ಸಮನ್ವಯಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು ರವರು ನಿಜಕ್ಕೂ ಅಭಿನಂದನಾರ್ಹರು. ಕಾಸರಗೋಡಿನ ಮಂಜೇಶ್ವರದಲ್ಲಿ ಅವರು ನನ್ನ ನಿಕಟವರ್ತಿ ಎಂಬುದು ನನಗೊಂದು ಹೆಮ್ಮೆಯ ವಿಷಯ.

ರೋಗಿಗಳ ಕುರಿತಾದ ಸಮಾಜಮುಖಿ ವೈದ್ಯ ಸಾಹಿತ್ಯ ಹೇಗಿರಬೇಕು ಎನ್ನುವುದಕ್ಕೆ ಸಂಕಲ್ಪ-2020 ಬಹುಮಟ್ಟಿಗೆ ಒಂದು ಮಾದರಿ ಎಂಬಂತೆ ಮೈವೆತ್ತಿದೆ. ರೋಗಕ್ಕೆ ಸಂಬಂಧಿಸಿದ ವಿವರಗಳನ್ನು ವೈಜ್ಞಾನಿಕ ಮತ್ತು ವೈದ್ಯಕೀಯ ತಳಹದಿಯಲ್ಲಿ ವಿಶ್ಲೇಷಣೆಗೆ ಗಂಭೀರವಾಗಿ ಮತ್ತು ಅಷ್ಟೇ ಸರಳವಾಗಿ ಒಳಗಾಗಿಸಿರುವುದು ಈ ಕೃತಿಯ ಹೆಗ್ಗಳಿಕೆ. ಇದು ಜನಸಾಮಾನ್ಯರಿಗೆ ಮಾತ್ರವಲ್ಲ. ವೈದ್ಯರು ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆಲ್ಲಾ ಅತ್ಯಂತ ಉಪಯುಕ್ತ ಎಂಬುವುದರಲ್ಲಿ ಸಂದೇಹವಿಲ್ಲ. ಕೃತಿಯಲ್ಲಿ ಪ್ರದಿಪಾದಿಸಲ್ಪಟ್ಟ ಮುಂಜಾಗ್ರತಾ ಕ್ರಮಗಳನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೋನಾ ಮಾತ್ರವಲ್ಲ ಇನ್ನೂ ಕೆಲವು ಸಾಂಕ್ರಾಮಿಕ ರೋಗಗಳಿಂದ ಪ್ರತ್ಯೇಕವಾಗಿ ವೈರಸ್ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. “ವೈರಸ್” ಎನ್ನುವ “ವಿಸ್ಮಯ”ವೆಂಬ ಕುತೂಹಲಕರವಾದ ಮೊದಲ ಅಧ್ಯಾಯದಿಂದ ಪ್ರಾರಂಭಿಸಿ ಕೊನೆಯ ಮಾತನ್ನು ಹೇಳುವ 30ನೇ ಅಧ್ಯಾಯದೊಂದಿಗೆ ಮುಕ್ತಾಯವಾಗುವ ಈ ಕೃತಿಯ ಒಂದೊಂದು ಅಧ್ಯಾಯದಲ್ಲೂ ರೋಗಕ್ಕೆ ಸಂಬಂಧಿಸಿದ ಬೇರೆ ಬೇರೆ ವಿಷಯಗಳ ಬಗ್ಗೆ ಅಮೂಲಾಗ್ರವಾದ ವಿವೇಚನಾಪೂರ್ಣ ವಿವರಗಳಿವೆ. ಅಧ್ಯಾಯದ ಶೀರ್ಷಿಕೆಗಳು ಆಸಕ್ತಿಯನ್ನು ಹುಟ್ಟಿಸುವಂತಿದ್ದು, ಕೊನೆ ಮುಟ್ಟುವ ತನಕವೂ ತನ್ಮಯತೆಯ ಓದಿಗೆ ಗ್ರಾಸವಾಗುತ್ತದೆ. ಉದಾಹರಣೆಗೆ “ಕ್ವಾರಂಟೈನ್”, “ಕೋವಿಡ್-19 ಸೋಂಕು ಹೇಗೆ ಹರಡುತ್ತದೆ”, “ಕೋವಿಡ್-19 ಮತ್ತು ಹತ್ತೊಂಬತ್ತು ಸಲಹೆಗಳು”, “ಕೋವಿಡ್-19 ಹಾಗೂ 19 ಮಿಥ್ಯಗಳು” ಇತ್ಯಾದಿ ಶೀರ್ಷಿಕೆಗಳನ್ನು ಗಮನಿಸಬಹುದು. ಮಾಸ್ಕ್ ಬಗ್ಗೆ ಒಂದು ಅಧ್ಯಾಯವನ್ನು ಮೀಸಲಾಗಿರಿಸಿ ಎಳೆಎಳೆಯಾಗಿ ವಿಷಧೀಕರಿಸುವಲ್ಲಿ ಬರಹಗಳ ಕುರಿತಾದ ನಿಖರತೆಯ ಬಗ್ಗೆ ಡಾ|| ಮುರಲೀ ಮೋಹನ್ ಅವರು ವಹಿಸಿದ ಶ್ರದ್ಧೆಗೆ ಸಾಕ್ಷಿ ನುಡಿಯುತ್ತದೆ. ಕನ್ನಡದ ಹಿರಿಯ ಸಾಹಿತಿ ಡಾ|| ಹರಿಕೃಷ್ಣ ಭರಣ್ಯ ಅವರು ಮುನ್ನುಡಿಯಲ್ಲಿ ಇದನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಜನಪರ ಕಾಳಜಿಯುಳ್ಳ ಡಾ||ಚೂಂತಾರು ಅವರು ದಂತ ವೈದ್ಯರಾಗಿ ಪ್ರಸಿದ್ಧರಾದವರು. ಅದೇ ಮನೋ ಧರ್ಮದಿಂದ ವೈದ್ಯ ಸಾಹಿತ್ಯದಲ್ಲೂ ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯುತ್ತಿರುವವರು. ಇಷ್ಟೊಂದು ಪ್ರಯೋಜನಕಾರಿಯಾದ 115 ಪುಟಗಳುಲ್ಲ ಈ ಕೃತಿಯನ್ನು ಕೇವಲ ರೂ. ಐವತ್ತಕ್ಕೆ ಆಸಕ್ತರಿಗೆ ಒದಗಿಸುವುದನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಅವರ ಸೇವಾ ಮನೋಭಾವದ ಕುರಿತು ಅಭಿಮಾನ ಹುಟ್ಟುತ್ತದೆ.

ಕೃತಿಯ ಒಟ್ಟಂದದ ದೃಷ್ಟಿಯಲ್ಲಿ ದೃಷ್ಟಿ ಬೊಟ್ಟಿನಂತೆ ಕಾಣಿಸಿಕೊಂಡಿರುವ ಕೆಲವು ಮುದ್ರಣ ದೋಷಗಳು ಮತ್ತು ಸಣ್ಣ ಪುಟ್ಟ ಸಾಹಿತ್ಯಕರವಾದ ಲೋಪಗಳು ಓದುಗರಿಗೆ ಸಹಜವಾಗಿಯೇ ಕಿರಿಕಿರಿಯನ್ನುಂಟುಮಾಡುತ್ತದೆ. ಆದರೆ ಇವುಗಳಿಂದ ಲೇಖನಗಳಲ್ಲಿರುವ ಖಚಿತತೆಗೆ ಏನೂ ಕುಂದು ಉಂಟಾಗಲಿಲ್ಲ. ಮುಂದಿನ ಆವೃತ್ತಿಯಲ್ಲಿ ಲೇಖಕರು ಇದನ್ನು ಖಂಡಿತವಾಗಿಯೂ ಸರಿಪಡಿಸುತ್ತಾರೆ ಎನ್ನುವ ಭರವಸೆ ನನ್ನಲ್ಲಿ ಇದೆ. ಡಾ|| ಮುರಲೀ ಮೋಹನ ಚೂಂತಾರು ಅವರಿಗೆ ಶುಭವನ್ನು ಹಾರೈಸೋಣ.

ಡಾ|| ರಮಾನಂದ ಬನಾರಿ
ಮಂಜೇಶ್ವರ
ಮೊ: 9446297226

error: Content is protected !!

Join the Group

Join WhatsApp Group