(ನ್ಯೂಸ್ ಕಡಬ) newskadaba.com ಲಖನೌ,ಜೂ 03: ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪವಿದ್ದ 22ಹರೆಯದ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್ಗಡದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪ್ರತಾಪ್ಗಡ ಜಿಲ್ಲೆಯ ಫತಾನ್ಪುರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ, ಸೋಮವಾರ ರಾತ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಜನರ ಗುಂಪು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದು ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಅಂಬಿಕಾ ಪ್ರಸಾದ್ ಪಟೇಲ್ ಎಂದು ಗುರುತಿಸಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸಿ ಕಾನ್ಪುರ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯ ಅಪ್ಪ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿ ಪಟೇಲ್ ತನ್ನ ಮಗಳ ಆಕ್ಷೇಪಾರ್ಹ ಫೋಟೊಗಳನ್ನು ಶೇರ್ ಮಾಡಿದ್ದಾನೆ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಯ ಅಪ್ಪ ಮಾರ್ಚ್ 1ರಂದು ಪೊಲೀಸರಿಗೆ ದೂರು ನೀಡಿದ್ದರು, ಇದರ ಪ್ರಕಾರ ಪಟೇಲ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಆಕ್ಷೇಪಾರ್ಹ ವಿಷಯ ಪ್ರಕಟಿಸುವುದು) ಮತ್ತು ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪಟೇಲ್ನ್ನು ಹತ್ಯೆಗೆ ಕಾರಣ ಅದೇ ಆಗಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತ ಪಡಿಸಿದ್ದಾರೆ.