(ನ್ಯೂಸ್ ಕಡಬ) newskadaba.com ಕೋಲಾರ, ಆ.31. ಕರ್ನಾಟಕದ ಮೂಲೆ ಮೂಲೆಯಿಂದಲೂ ಕ್ಯಾಂಟೀನ್ ಸದ್ದು ಜೋರಾಗಿದೆ. ಕಾಂಗ್ರೆಸ್ ಪಕ್ಷದಿಂದ “ಇಂದಿರಾ ಕ್ಯಾಂಟೀನ್”, ಜೆಡಿಎಸ್‍ನ “ಅಪ್ಪಾಜಿ ಕ್ಯಾಂಟೀನ್” ಇದೀಗ ಬಿಜೆಪಿ ಮುಖಂಡರ “ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್” ಹೀಗೆ ಕ್ಯಾಂಟೀನ್ ಗಳ ಕಾರುಬಾರು ಜೋರಾಗಿಯೇ ಇದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿಯವರು, ತಮ್ಮದೇ ಹೆಸರಿನಲ್ಲಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕೆಲವು ಸಮಯದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಕೃಷ್ಣಯ್ಯಶೆಟ್ಟಿಯವರು ಮತ್ತೆ ಮಾಲೂರು ಕ್ಷೇತ್ರದಲ್ಲಿ ಟಿಕೇಟ್ ಪಡೆಯುವ ಸಲುವಾಗಿ ಹೊಸ ಪ್ಲ್ಯಾನ್ ಮಾಡಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಉಚಿತವಾಗಿ ಉಪಹಾರ ನೀಡುತ್ತಿದ್ದಾರೆ. ಕೃಷ್ಣಯ್ಯಶೆಟ್ಟಿಯವರು ಹೀಗೆ ಟೇಕಲ್ ರೈಲು ನಿಲ್ದಾಣದ ಬಳಿ ಕ್ಯಾಂಟೀನ್ ಆರಂಭ ಮಾಡಿದ್ದರಿಂದ ಸ್ಥಳೀಯ ಕೆಲವು ಹೋಟೆಲ್ ಮಾಲೀಕರುಗಳಿಗೆ ಹಾಗೂ ಸಣ್ಣ ಪುಟ್ಟ ಹೋಟೆಲ್ ನಡೆಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಅಸಮದಾನ ವ್ಯಕ್ತವಾಗಿದೆ.