(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.23. ಕೊರೋನಾ ಇದ್ದ ಬೆಳ್ಳಾರೆಯ ವ್ಯಕ್ತಿಯೋರ್ವರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯು ಕ್ಷಣಮಾತ್ರದಲ್ಲಿ ಹರಡಿ ಕರಾವಳಿಯ ಜನತೆಯನ್ನು ಮತ್ತೆ ಆತಂಕಗೊಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಘಟನೆಯ ಸತ್ಯಾಸತ್ಯತೆಯನ್ನು ಹುಡುಕಿದ ‘ನ್ಯೂಸ್ ಕಡಬ’ ತಂಡವು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದು, ವಾಟ್ಸ್ಅಪ್ ನಲ್ಲಿ ಹರಿದಾಡುತ್ತಿದ್ದುದು ಸುಳ್ಳು ಸುದ್ದಿ ಎಂಬುವುದನ್ನು ಪತ್ತೆ ಹಚ್ಚಿದೆ. ಸತ್ಯಾಂಶವೇನೆಂದರೆ ಬೆಳ್ಳಾರೆಯ ಸರಕಾರಿ ಅಧಿಕಾರಿಯೋರ್ವರು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದು, ಸ್ಯಾಂಪಲ್ ನ್ನು ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಧಿಕಾರಿಯು ಮನೆಗೆ ಹಿಂತಿರುಗಿದ್ದರು. ಈ ನಡುವೆ ಕೊರೋನಾ ಪರೀಕ್ಷೆಯ ರಿಪೋರ್ಟ್ ಬರುವ ತನಕ ಆಸ್ಪತ್ರೆಯಲ್ಲಿರುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದರಿಂದ ಅವರು ಹಿಂತಿರುಗಿದ್ದರು. ಆದರೆ ಕೆಲವು ಕಿಡಿಗೇಡಿಗಳು ‘ಕೊರೋನಾ ಇದ್ದ ಬೆಳ್ಳಾರೆಯ ವ್ಯಕ್ತಿಯೋರ್ವರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದರು. ಕಿಡಿಗೇಡಿಗಳು ಹರಡಿರುವ ಸುಳ್ಳು ಸುದ್ದಿಯನ್ನು ಯಾರೂ ನಂಬಬೇಡಿ. ಇದೀಗ ಕೊರೋನಾ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಬಂದಿದ್ದು ಸಾರ್ವಜನಿಕರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉನ್ನತ ಮಟ್ಟದ ಅಧಿಕಾರಿಯೋರ್ವರು ಸ್ಪಷ್ಟಪಡಿಸಿದ್ದಾರೆ.