ಲಾಕ್‌ಡೌನ್ ಸಂದರ್ಭದಲ್ಲಿ ರಂಝಾನ್: ಎಲ್ಲ ಮಸೀದಿಗಳಿಗೆ ರಾಜ್ಯ ವಕ್ಫ್‌ನಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು, ಎ.16: ಇದೇ ತಿಂಗಳಲ್ಲಿ ಮುಸ್ಲಿಮರ ಪವಿತ್ರ ರಂಝಾನ್ ತಿಂಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಎಲ್ಲ ಮಸೀದಿಗಳು, ದರ್ಗಾಗಳ ಆಡಳಿತ ಸಮಿತಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಗುರುವಾರ ವಕ್ಫ್ ಬೋರ್ಡ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಈ ವಿಷಯವನ್ನು ತಿಳಿಸಿದರು.

ಈ ಹಿಂದೆಯೆ ಸೂಚಿಸಿರುವಂತೆ ಪ್ರತಿ ದಿನದ ಐದು ಹೊತ್ತಿನ ನಮಾಝ್, ಶುಕ್ರವಾರದ ವಿಶೇಷ ನಮಾಝ್ ಹಾಗೂ ರಂಝಾನ್ ಮಾಸದಲ್ಲಿ ನಿರ್ವಹಿಸುವ ತರಾವೀಹ್ ನಮಾಝ್ ಅನ್ನು ಯಾವುದೇ ಕಾರಣಕ್ಕೂ ಗುಂಪುಗೂಡಿ ನಿರ್ವಹಿಸುವಂತಿಲ್ಲ, ಮಸೀದಿಗೆ ಬರುವಂತಿಲ್ಲ. ಮಸೀದಿಯ ಸಿಬ್ಬಂದಿಯನ್ನು ಬಳಸಿಕೊಂಡು ಧಾರ್ಮಿಕ ಪ್ರವಚನ ನೀಡುವುದಾಗಲಿ, ಶುಕ್ರವಾರದ ವಿಶೇಷ ನಮಾಝ್ ಹಾಗೂ ತರಾವೀಹ್ ನಮಾಝ್ ನಿರ್ವಹಿಸುವಂತಿಲ್ಲ. ಮಸೀದಿಯ ಸಿಬ್ಬಂದಿ ಮಸೀದಿಯಲ್ಲಿ ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸಬಾರದು. ಮುಅಝ್ಝಿನ್ ಅಥವಾ ಇಮಾಮ್ ಈ ಹಿಂದಿನಂತೆ ಸಹರಿ ಸಮಯ ಮುಕ್ತಾಯಗೊಳ್ಳುವ ಹಾಗೂ ಇಫ್ತಾರ್ ಸಮಯ ಆರಂಭಗೊಳ್ಳುವ ಸೂಚನೆಯನ್ನು ನೀಡಬಹುದಾಗಿದೆ.

Also Read  ಬಂಟ್ವಾಳ: ಅಂಗಡಿ ಯಾಕೆ ತಡವಾಗಿ ತೆರೆಯುತ್ತೀಯಾ? ಎಂದು ಪ್ರಶ್ನಿಸಿ ವ್ಯಕ್ತಿಗೆ ಚೂರಿ ಇರಿತ..!

ಸಹರಿ ಅಥವಾ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ. ಮೊಹಲ್ಲಾಗಳಲ್ಲಿ ಹಂಚುವ ಉದ್ದೇಶದಿಂದ ಮಸೀದಿಯ ಆವರಣದೊಳಗೆ ಗಂಜಿ, ಪಾನೀಯಗಳನ್ನು ಸಿದ್ಧಪಡಿಸುವಂತಿಲ್ಲ. ಅಲ್ಲದೆ, ಮಸೀದಿ ಹಾಗೂ ದರ್ಗಾಗಳ ಬಳಿ ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತಿಲ್ಲ ಎಂದು ಇಬ್ರಾಹಿಂ ಸೂಚಿಸಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಕ್ಫ್ ಸಂಸ್ಥೆಗಳ ಎಲ್ಲ ಆಡಳಿತ ಸಮಿತಿಗಳು ಈ ಆದೇಶವನ್ನು ಪಾಲನೆ ಮಾಡಬೇಕು. ಹಾಗೂ ಈ ಹಿಂದೆ ವಕ್ಫ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊರಡಿಸಿರುವ ಆದೇಶವನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು. ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಮಾತನಾಡಿ, ರಾಜ್ಯದ 33 ಸಾವಿರ ವಕ್ಫ್ ಸಂಸ್ಥೆಗಳಿಗೂ ಸರಕಾರದ ಈ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಮಾರತ್-ಎ-ಶರಿಯಾ ನೀಡಿರುವ ಮಾರ್ಗಸೂಚಿಗಳನ್ನು ವಕ್ಫ್ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದರು. ಕೋವಿಡ್-19 ವಿರುದ್ಧದ ಹೋರಾಟದ ಕುರಿತು ಸರಕಾರ ಕೈಗೊಳ್ಳುತ್ತಿರುವ ಎಲ್ಲ ಕ್ರಮಗಳಿಗೂ ವಕ್ಫ್ ಬೋರ್ಡ್ ಪೂರಕವಾಗಿ ಕೆಲಸ ಮಾಡುತ್ತಿದೆ. ಸರಕಾರದ ನಿರ್ದೇಶನಗಳು ಹಾಗೂ ಇಮಾರತ್-ಎ-ಶರಿಯಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ಮುಸ್ಲಿಮರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

Also Read  ಮತದಾರರಿಗೆ ಆಮಿಷ, ನಗದು, ಕುಕ್ಕರ್‌, ಹೆಲ್ಮೆಟ್‌, ದಿನಸಿ ಕಿಟ್‌ಗಳ ಜಪ್ತಿ..!

ಮನೆಯಲ್ಲಿಯೇ ಸುರಕ್ಷಿತವಾಗಿದ್ದುಕೊಂಡು ಪವಿತ್ರ ರಮಝಾನ್ ಮಾಸದ ಉಪವಾಸ, ಪ್ರಾರ್ಥನೆಗಳನ್ನು ಆಚರಿಸಿ. ಯಾವುದೆ ಕಾರಣಕ್ಕೂ ಲಾಕ್ಡೌನ್ ಉಲ್ಲಂಘನೆ ಮಾಡಬೇಡಿ. ರಮಾಝಾನ್ ತಿಂಗಳಲ್ಲಿ ಬಡವರು, ಅಶಕ್ತರಿಗೆ ನೆರವು ನೀಡುವುದನ್ನು ಮುಂದುವರಿಸಿ. ಝಕಾತ್ ಹಾಗೂ ಸ್ವದಖಾ ಮೂಲಕ ನಿಮ್ಮ ಸಂಬಂಧಿಕರು, ನೆರೆಹೊರೆಯವರು ಹಾಗೂ ನೆರವಿನ ಅಗತ್ಯ ಇರುವಂತಹ ಸರ್ವ ಧರ್ಮೀಯರಿಗೂ ನೆರವು ನೀಡಿ ಎಂದು ಮುಹಮ್ಮದ್ ಯೂಸುಫ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!
Scroll to Top