ಕೊರೋನ ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಬೆಂಗಳೂರು, ಎ.9: ಕೊರೋನ ವೈರಸ್‌ ಸಂಪೂರ್ಣ ನಿರ್ನಾಮ ಆಗುವವರೆಗೂ ಅಂದರೆ ಕನಿಷ್ಠ ಮುಂದಿನ 7-8 ತಿಂಗಳು ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬಿಬಿಎಂಪಿಯ ಪೌರ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮಲ್ಲೇಶ್ವರದಲ್ಲಿ ಪಡಿತರ ವಿತರಣೆ ಮಾಡಿದ ಡಾ. ಅಶ್ವತ್ಥನಾರಯಣ ಅವರು ಸುದ್ದಿಗಾರರ ಜತೆ ಮಾತನಾಡಿದರು.
“ಪ್ರಸ್ತುತ ಸಭೆ, ಸಮಾರಂಭಗಳನ್ನು ಆಯೋಜಿಸದೆ ನಾಗರಿಕರೂ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಆದರೆ ವೈರಸ್‌ ಸಂಪೂರ್ಣವಾಗಿ ನಿರ್ಮೂಲನೆ ಆಗುವವರೆಗೂ ಅಂದರೆ ಮುಂದಿನ 7-8 ತಿಂಗಳು ಇದೇ ರೀತಿ ಸಹಕಾರ ಮುಂದುವರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಮಾಸ್ಕ್‌ಗಳನ್ನು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು”ಎಂದರು.
“ಸೋಂಕಿನ ಪ್ರಮಾಣ, ಸ್ಥಿತಿಗತಿ ಹಾಗೂ ವ್ಯವಸ್ಥೆಯ ಸದೃಢತೆಯನ್ನು ಪರಿಶಿಲೀಸಿದ ನಂತರ ಲಾಕ್‌ಡೌನ್‌ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು.  ಸಮಾಜದ ಹಿತದೃಷ್ಟಿ ಕಾಯುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು,”ಎಂದು ಮನವಿ ಮಾಡಿದರು.

Also Read  ದರ್ಶನ್‌ ಜಾಮೀನಿಗೆ ಸಂಕಷ್ಟ, ಸುಪ್ರೀಂ ಕೋರ್ಟ್‌ ಮೊರೆ ಹೋದ ಪೊಲೀಸರು

ನಿತ್ಯ 12 ಸಾವಿರ ಆಹಾರ ಪೊಟ್ಟಣ ವಿತರಣೆ

“ಮಲ್ಲೇಶ್ವರ ಭಾಗದಲ್ಲಿ ಪ್ರತಿನಿತ್ಯ 12 ಸಾವಿರ ಆಹಾರ ಪೊಟ್ಟಣಗಳನ್ನು ಅಗತ್ಯ ಇರುವವರಿಗೆ ವಿತರಿಸುವ ಕೆಲಸ ಮಾಡಲಾಗುತ್ತಿದೆ. ಆಹಾರ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಸಿದ್ದೇನೆ. ಕೂಲಿ ಕಾರ್ಮಿಕರು, ಅಸಹಾಯಕರು, ಹಿರಿಯ ನಾಗರಿಕರ ಮನೆಗೆ ತೆರಳಿ, ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.  ಔಷಧ, ಆಹಾರ ಹಾಗೂ ಇನ್ನಿತರ ಸೌಕರ್ಯಕ್ಕಾಗಿ ಮಲ್ಲೇಶ್ವರ ಕ್ಷೇತ್ರದ ಎಲ್ಲ ವಾರ್ಡ್‌ಗಳ ನಾಗರಿಕರಿಗೆ 3 ಮೊಬೈಲ್‌ ನಂಬರ್‌ ಕೊಟ್ಟಿದ್ದೇವೆ. ಜತೆಗೆ, ಎಲ್ಲ ರಸ್ತೆಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಲಾಗುತ್ತಿದೆ,”ಎಂದು ಮಾಹಿತಿ ನೀಡಿದರು.

ಪಡಿತರ ವಿತರಣೆ

ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬರುವ ಪಡಿತರವನ್ನು 20ನೇ ತಾರೀಕಿನ ನಂತರ ವಿತರಣೆ ಮಾಡಲಾಗುತ್ತದೆ. ಇದಲ್ಲದೇ, ಕಾರ್ಮಿಕ ಇಲಾಖೆಯಿಂದ ಒಂದೂವರೆ ಲಕ್ಷ ಮಂದಿಗೆ ಪಡಿತರ ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ 2 ಲಕ್ಷ ಮಂದಿಗೆ ಪಡಿತರ ವಿತರಿಸಲು ನಿರ್ಧರಿಸಲಾಗಿದೆ. ಜತೆಗೆ ಚುನಾಯಿತ ಪ್ರತಿನಿಧಿಗಳು, ಸಂಘಟನೆಗಳು, ನಾಗರಿಕರು  ಲಕ್ಷಾಂತರ ಜನರಿಗೆ ಆಹಾರ ಒದಗಿಸುವ ಮೂಲಕ ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ”ಎಂದು ಅಭಿನಂದಿಸಿದರು.

Also Read  ಸರಣಿ ಅಪಘಾತ- ಬೈಕ್ ಸವಾರನ ಮೇಲೆ ಹರಿದ ಕ್ಯಾಂಟರ್ - ಸವಾರ ಮೃತ್ಯು

error: Content is protected !!
Scroll to Top