ಕೊರೋನ ಹೆಸರಲ್ಲಿ ಪ್ರಚೋದನಕಾರಿ, ಸುಳ್ಳು ಸುದ್ದಿ ಹರಡಿದಲ್ಲಿ ಕಠಿಣ ಕ್ರಮ: ಎಸ್ಪಿ ಎಚ್ಚರಿಕೆ

ಮಂಗಳೂರು, ಎ.6: ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಾದ್ಯಂತ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಮತ್ತು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ಅದರಂತೆ ದ.ಕ. ಜಿಲ್ಲೆಯಲ್ಲಿ ಈಗಾಗಲೇ ಕೋಮು ಭಾವನೆ ಕೆರಳಿಸುವ ಮೂಲಕ ಒಂದು ಕೋಮಿನ ವಿರುದ್ಧ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳನ್ನು ಹರಿದಾಡುತ್ತಿರುವ ಆರೋಪದ ಮೇಲೆ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕೋಮಿನ ಧಾರ್ಮಿಕತೆಗೆ ಧಕ್ಕೆಯಾಗುವಂತೆ ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರ ಮಾಡಿದರೆ ಅಂಥಹ ಕಿಡಿಗೇಡಿಗಳ ಮೊಬೈಲ್ ವಶಪಡಿಸಿಕೊಳ್ಳುವ ಜೊತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

Also Read  ವಿಶ್ವಕರ್ಮರು ಶ್ರಮ ಜೀವಿಗಳು- ಮಮತಾ ಗಟ್ಟಿ

ಅಲ್ಲದೆ ಈಗಾಗಲೇ ಹೋಮ್ ಕ್ವಾರೆಂಟೈನ್‌ನಲ್ಲಿರುವ ವ್ಯಕ್ತಿಗಳು ಇಂಥಹ ಕುಕೃತ್ಯದಲ್ಲಿ ಭಾಗಿಯಾಗಿದ್ದರೆ ಅಂಥವರ ವಿರುದ್ಧ ಕ್ವಾರೆಂಟೈನ್ ಅವಧಿ ಮುಗಿದ ಬಳಿಕ ಕಠಿಣ ಕಾನೂನು ಕ್ರಮ ಜರುಗಿಸಲಾಗುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಪತ್ರಿಕಾ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

error: Content is protected !!