(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಬೆಳ್ತಂಗಡಿ ತಾಲೂಕಿಗೂ ಕೊರೋನಾ ಕಾಲಿಟ್ಟಿದ್ದು, ವಿದೇಶದಿಂದ ಆಗಮಿಸಿದ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದ್ದು, ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏಳಕ್ಕೇರಿದೆ.
ದುಬೈಯಲ್ಲಿದ್ದ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ 21 ವರ್ಷ ಪ್ರಾಯದ ಯುವಕ ಮಾರ್ಚ್ 21ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಊರಿಗೆ ಬಂದಿದ್ದ ಯುವಕನಿಗೆ ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯಲ್ಲಿ ಕೊರೋನ ಸೋಂಕು ತಗುಲಿರುವುದು ಸ್ಪಷ್ಟಗೊಂಡಿದೆ. ಸದ್ಯ ಯುವಕನ ಆರೋಗ್ಯ ಸ್ಥಿರವಾಗಿದ್ದು, ಈತನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.