ಲಾಕ್ ಡೌನ್ ವೇಳೆ ಗೋಲಿಬಾರ್ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಲು ಪಾಪ್ಯುಲರ್ ಫ್ರಂಟ್ ಆಗ್ರಹ

ಬೆಂಗಳೂರು : ಕೊರೋನ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ವೇಳೆಯಲ್ಲಿ ಗೋಲಿಬಾರ್ ನಡೆಸಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆಂಗಳೂರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಆಗ್ರಹಿಸಿದ್ದಾರೆ.

ಇದೇ ವೇಳೆ ಕರ್ತವ್ಯನಿರತ ಪೊಲೀಸರೊಂದಿಗೆ ನಾಗರಿಕರು ಸಂಪೂರ್ಣವಾಗಿ ಕೈಜೋಡಿಸಬೇಕಾಗಿದ್ದು, ಸಂಯಮ ಕಳೆದು ಪೊಲೀಸರ ಮೇಲೆ ನಡೆಸುವ ಹಲ್ಲೆ ಕೃತ್ಯವನ್ನೂ ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ. ಕೊರೋನ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಇದು ಆಡಳಿತ ವ್ಯವಸ್ಥೆ ಮತ್ತು ನಾಗರಿಕರ ಸಹಯೋಗದೊಂದಿಗೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ವೇಳೆ ಕೆಲವು ಕಡೆ ಪೊಲೀಸರು ಏಕಾಏಕೀ ಯಾವುದೇ ವಿಚಾರಣೆ ಇಲ್ಲದೆ ಥಳಿಸುತ್ತಿರುವ ಪ್ರಕರಣವು ಬೆಳಕಿಗೆ ಬರುತ್ತಿದೆ. ಬೆಂಗಳೂರಿನ ಸಂಜಯನಗರದಲ್ಲಿ ಯುವಕನ ಮೇಲೆ ಪೊಲೀಸರು ತೀವ್ರಸ್ವರೂಪದ ಹಲ್ಲೆ ನಡೆಸಿದ್ದು, ಮೊಣಕಾಲಿಗೆ ಗುಂಡುಹಾರಿಸಿ ಪೊಲೀಸರು ದ್ವೇಷ ತೀರಿಸಿರುವುದು ಖಂಡನಾರ್ಹ.

ಇಡೀ ಜಗತ್ತು ಮಾನವೀಯತೆ ಭಾಷೆಯಲ್ಲಿ ವ್ಯವಹರಿಸುತ್ತಿರುವ ಈ ಸನ್ನಿವೇಶದಲ್ಲೂ ಅಮಾನವೀಯವಾಗಿ ವರ್ತಿಸಿರುವ ಪೊಲೀಸರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ. ಇದು ಗಲಭೆಗೆ ಸಂಬಂಧಿಸಿದ ಕರ್ಫ್ಯೂ ಆಗಿರದೆ ಸಾಮಾಜಿಕ ಕಳಕಳಿಯ ದಿಗ್ಬಂಧನವಾಗಿದೆ. ಈ ಸಂದರ್ಭದಲ್ಲಿ ಜನರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಎಲ್ಲ ಠಾಣೆಗಳಿಗೂ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಸರಕಾರ ಅಗತ್ಯ ಸಾಮಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು 21 ದಿನಗಳ ಕಾಲ ಲಾಕ್ ಡೌನ್ ಎಂಬುದು ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ ಅಗತ್ಯ ಸಾಮಗ್ರಿ ಖರೀದಿಗಾಗಿ ಜನರು ಬೀದಿಗೆ ಬರುವ ಸಾಧ್ಯತೆಯನ್ನು ಮನಗಂಡು ದಾರಿಹೋಕರೊಂದಿಗೆ ಮಾತನಾಡಿ ಮನವೊಲಿಸಿ ವ್ಯವಹರಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ದೇಶನಗಳನ್ನು ನೀಡಿದ್ದಾರೆ. ಬೆಂಗಳೂರಿನ ಪೊಲೀಸರು ಈ ಎಲ್ಲ ನಿರ್ದೇಶನಗಳನ್ನು ಉಲ್ಲಂಘಿಸಿ ಯುವಕನ ಮೇಲೆ ಹಲ್ಲೆ ನಡೆಸಿ ಗೋಲಿಬಾರ್ ನಡೆಸಿರುವುದು ಅನಾಗರಿಕ ವರ್ತನೆ ಎಂದು ನಾಸಿರ್ ಪಾಶ ಖಂಡಿಸಿದ್ದಾರೆ.

Also Read  ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್

ಲಾಕ್ ಡೌನ್ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಪೇದೆಯು ಯುವಕನೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿರುತ್ತದೆ. ಹೊರಗಡೆ ತಿರುಗುತ್ತಿದ್ದ ಯುವಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದಾಗಿದ್ದ ಕ್ಷುಲ್ಲಕ ಘಟನೆಯು ವಿಕೋಪಕ್ಕೆ ತಿರುಗಲು ಪೊಲೀಸ್ ಪೇದೆಯ ಅನಪೇಕ್ಷಿತ ಅತಿರೇಕದ ವರ್ತನೆಯೇ ಕಾರಣ ಎಂಬುದು ವೀಡಿಯೋ ಸಾಕ್ಷಿ ಹೇಳುತ್ತಿದೆ. ಘಟನೆಯು ವಿಕೋಪಕ್ಕೆ ತಿರುಗಿ ಇಬ್ಬರು ಯುವಕರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಖ್ಯ ಆರೋಪಿ ಎಂದು ಯುವಕನನ್ನು ಬಂಧಿಸಿದ್ದರು. ಠಾಣೆಯಲ್ಲಿ ಪೊಲೀಸರು ಯುವಕನನ್ನು ತೀವ್ರವಾಗಿ ಥಳಿಸಿ ಬಳಿಕ ಮೊಣಕಾಲಿಗೆ ಗುಂಡುಹಾರಿಸಿ ದ್ವೇಷ ಸಾಧಿಸಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಾತ್ರವಲ್ಲದೆ ಮನೆಯವರನ್ನೂ ಠಾಣೆಗೆ ಕರೆಸಿ ಕಿರುಕುಳ ನೀಡಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗಡೆ ತಿಳಿಸದಂತೆ ಬೆದರಿಕೆಯನ್ನೂ ಒಡ್ಡಿರುವುದು ಪೊಲೀಸರ ಆಘಾತಕಾರಿ ನಡೆ ಎಂದು ನಾಸಿರ್ ಪಾಶ ತಿಳಿಸಿದ್ದಾರೆ.

error: Content is protected !!
Scroll to Top