ಬೆಂಗಳೂರು, ಮಾ.13: ಕೊರೋನ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಾಜ್ಯಾದ್ಯಂತ ಸಿಬಿಎಸ್‌ಇ, ಐಸಿಎಸ್‌ಇ ಸಹಿತವಾಗಿ ಎಲ್ಲಾ ಶಾಲೆಗಳ 1ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.14ರಿಂದ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಪ್ರಾರಂಭವಾಗಿದ್ದ ಪರೀಕ್ಷೆಯನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
1ರಿಂದ 6ನೇ ತರಗತಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ (2019-20) ನೇ ಶೈಕ್ಷಣಿಕ ಸಾಲಿನಲ್ಲಿ ಎಫ್‌ಎ-1, ಎಫ್‌ಎ-2, ಎಫ್‌ಎ-3, ಎಫ್‌ಎ-4 ಮತ್ತು ಎಸ್ ಎ -2 ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶ್ರೇಣಿಕೃತ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಭಡ್ತಿ ನೀಡುವಂತೆ ಆದೇಶಿಸಲಾಗಿದೆ. ಏಳರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ರಜೆ ಇರಲಿದ್ದು, ಯಾವುದೇ ತರಗತಿಯನ್ನು ನಡೆಸುವಂತಿಲ್ಲ. 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧ ತರಗತಿ ಪರೀಕ್ಷಾ ದಿನದಂದು ಮಾತ್ರ ಹಾಜರಾಗಲು ಸೂಚಿಸಲಾಗಿದೆ.
ಬೇಸಿಗೆ ರಜೆ ನಂತರ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ವೇಳಾಪಟ್ಟಿಯಂತೆ ಪುನರಾರಂಭಿಸಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.