(ನ್ಯೂಸ್ ಕಡಬ) newskadaba.com ಕಡಬ, ಮಾ.13. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದು ಗಾಯಗೊಂಡು ರಸ್ತೆ ಬದಿ ಬಿದ್ದ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂತೂರು ಪದವು – ಬಲ್ಯ ನಡುವಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ರಸ್ತೆ ಬದಿ ಬಿದ್ದಿದ್ದ ಕಡವೆಯನ್ನು ಗಮನಿಸಿ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಗಿರೀಶ್. ಆರ್., ಉಪ ವಲಯ ಅರಣ್ಯಾಧಿಕಾರಿ ರವಿ ಪ್ರಕಾಶ್, ಅರಣ್ಯ ರಕ್ಷಕರಾದ ರವಿ ಕುಮಾರ್, ರವಿಚಂದ್ರ, ಸುಬ್ರಹ್ಮಣ್ಯರವರು ಕಡವೆಗೆ ಪ್ರಥಮ ಚಿಕಿತ್ಸೆ ನೀಡಲು ಕಡಬದ ಪಶು ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಗಿದೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ
ಕಡವೆಯನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಲಾಗಿದೆ. ಬಲ್ಯ – ಪದವು ನಡುವೆ ಕೆರೆಯೊಂದು ಇದ್ದು, ಕಾಡು ಪ್ರಾಣಿಗಳು ನೀರು ಕುಡಿಯಲು ನಿತ್ಯ ಸಂಚರಿಸುತ್ತಿವೆ. ರಾತ್ರಿ ಘನವಾಹನಗಳ ಭರಾಟೆ ಜೋರಾಗಿದ್ದು, ವಾಹನ ನಿಧಾನವಾಗಿ ಸಂಚರಿಸಿದರೆ ಕಾಡು ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ.