ಕಡಬ: ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕ ಬಲಿ ➤ ಎಚ್1ಎನ್1 ಭೀತಿಯಲ್ಲಿ ಕಡಬದ ಜನತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.04. ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕರೋರ್ವರು‌ ಬಲಿಯಾದ ಘಟನೆ ಕಡಬದಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದು, ಪ್ರಸ್ತುತ ಕಡಬದಲ್ಲಿ ಆಟೋ ಓಡಿಸುತ್ತಿದ್ದ ಕಡಬ ತಾಲೂಕು 102ನೇ ನೆಕ್ಕಿಲಾಡಿ ಗ್ರಾಮದ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ (50) ಅವರು ಶಂಕಿತ ಎಚ್‌1ಎನ್‌1 ಜ್ವರದಿಂದಾಗಿ ಮಂಗಳವಾರದಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಪ್ಪತ್ತು ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ. ಕುಶಾಲಪ್ಪ ಅವರು ಎಚ್‌1ಎನ್‌1 ಜ್ವರದಿಂದಾಗಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಕಡಬ ಪರಿಸರದಲ್ಲಿ ಭೀತಿಗೆ ಕಾರಣವಾಗಿದೆ.

ಕುಶಾಲಪ್ಪ ಎಂಬವರು ಜ್ವರ ಉಲ್ಬಣಗೊಂಡು ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ. ಶಂಕಿತ ಎಚ್1ಎನ್1 ಜ್ವರಕ್ಕೆ ಬಲಿಯಾಗಿದ್ದಾರೆಂಬ ಬಗ್ಗೆ ಸುದ್ದಿ ಹರಡುತ್ತಿದ್ದು, ಈ ಬಗ್ಗೆ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಿ ವರದಿ ಬಂದ ಮೇಲೆ ತಿಳಿದು ಬರಲಿದೆ. ಶಂಕಿತ ಜ್ವರದ ಬಗ್ಗೆ ಕಡಬ ಪರಿಸರದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಆರೋಗ್ಯ ಸಹಾಯಕಿಯರ ಮೂಲಕ ಜಾಗೃತಿ ಮೂಡಿಸುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ‘ನ್ಯೂಸ್ ಕಡಬ’ಕ್ಕೆ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group