(ನ್ಯೂಸ್ ಕಡಬ) newskadaba.com ಮೈಸೂರು, ಆ.26. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಐದು ಪ್ರವಾಸಿ ತಾಣಗಳ ವೀಕ್ಷಣೆಗೆ ಇನ್ನು ಅಲ್ಲಲ್ಲಿ ಟಿಕೆಟ್ ಪಡೆದುಕೊಳ್ಳಲು ಕೌಂಟರ್‍ನಲ್ಲಿ ಕಾಯುವುದಕ್ಕೆ ಇನ್ನು ತೆರೆಬೀಳಲಿದೆ.
ಪ್ರಮುಖ ತಾಣಗಳ ವೀಕ್ಷಣೆಗೆ ಏಕ ರೂಪ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರು ಆನ್‌ಲೈನ್‌ನಲ್ಲಿ ಒಂದು ಟಿಕೆಟ್ ಖರೀದಿಸಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟ, ಕೆಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಬಹುದಾಗಿದೆ. ಬೇಸಿಗೆ ರಜೆ, ವಾರಾಂತ್ಯ ಹಾಗೂ ಸರ್ಕಾರಿ ರಜೆ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ವಿದೇಶಿ ಪ್ರವಾಸಿಗರ ಬೇಡಿಕೆಯಿಂದ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಬುಕ್‌ಮೈಶೋ (BookMyShow) ಕಂಪನಿಯ ಸಹಯೋಗದಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸದ್ಯ ರಾಜ್ಯದಲ್ಲಿ ಇಂಥ ವ್ಯವಸ್ಥೆ ಪ್ರಥಮ ಎನ್ನಲಾಗಿದೆ. ದಸರಾ ವೆಬ್‌ಸೈಟ್ ಹಾಗೂ ಪ್ರವಾಸಿ ತಾಣಗಳ ವೆಬ್‌ಸೈಟ್ ಮತ್ತು ಮೊಬೈಲ್ ಆಪ್ ಗಳ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ. ನಂತರ ಟಿಕೆಟನ್ನು ಇ-ಮೇಲ್‌ಗೆ ಕಳುಹಿಸಿಕೊಡುವ ವ್ಯವಸ್ಥೆಯಿದೆ. ಇಂತಹ ವಿನೂತನ ಪ್ರಯೋಗದ ಮೂಲಕ ಕೇಂದ್ರೀಕೃತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.