(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.06. ಹೃದಯ ಸಂಬಂಧಿ ಚಿಕಿತ್ಸೆಗಾಗಿ 40 ದಿನದ ಪುಟ್ಟ ಕಂದಮ್ಮನನ್ನು ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆ ತಂದ ಆಂಬ್ಯುಲೆನ್ಸ್ ಚಾಲಕ ಮುಹಮ್ಮದ್ ಹನೀಫ್ ಪರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ನಿವಾಸಿಯಾಗಿರುವ ಹನೀಫ್ ಸುಮಾರು 360 ಕಿಮೀ ದೂರವನ್ನು ಕೇವಲ 4 ಗಂಟೆ 20 ನಿಮಿಷಗಳಲ್ಲಿ ಕ್ರಮಿಸಿ ಹೃದ್ರೋಗಿ ಪುಟ್ಟ ಕಂದಮ್ಮನನ್ನು ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ತಲುಪಿಸಿದ್ದು, ಅವರನ್ನು ಅಲ್ಲಿ ನೆರೆದಿದ್ದವರು ಹೂ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹನೀಫ್, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಸಾರ್ವಜನಿಕರಿಗೆ ಹಾಗೂ ಝೀರೋ ಟ್ರಾಫಿಕ್ ಮಾಡಿಕೊಟ್ಟು ಸಹಕರಿಸಿದ ರಾಜ್ಯ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು. ಆದರೆ ನೆಲಮಂಗಲದಿಂದ ಜಯದೇವ ಆಸ್ಪತ್ರೆಯವರೆಗೆ ಟ್ರಾಫಿಕ್ ಸಮಸ್ಯೆ ಎದುರಾಯಿತಾದರೂ ಕೊಂಚ ಸುಧಾರಿಸಿಕೊಂಡು 04 ಗಂಟೆ 20 ನಿಮಿಷಗಳಲ್ಲಿ ತಲುಪಲು ಸಾಧ್ಯವಾಯಿತು ಎಂದು ತಿಳಿಸಿದರು.