(ನ್ಯೂಸ್ ಕಡಬ) newskadaba.com ಬಜ್ಪೆ, ಆ.25. ಗಣೇಶ್ ಚತುರ್ಥಿ ಪ್ರಯುಕ್ತ ಪೂಜೆಗೆಂದು ಸುರತ್ಕಲ್ ನಿಂದ ಕಟೀಲು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವಕರಿದ್ದ ಬೈಕ್ ಗೆ ಬಜ್ಪೆ ಚೆಕ್ ಪೋಸ್ಟ್ ಬಳಿ ONGC ಕಂಪೆನಿಯ ಮಿನಿ ಬಸ್ಸೊಂದು ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.
ಘಟನೆಯಲ್ಲಿ ಕೈ, ಕಾಲು ಮುರಿತಕ್ಕೊಳಗಾಗಿ ಮತ್ತು ಎದೆಗೆ ತೀವ್ರ ತರದ ಏಟು ಬಿದ್ದು ಅರೆ ಪ್ರಜ್ಞಾವಸ್ತೆಯಲ್ಲಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರ ಜಗದೀಶ್ ಹಾಗೂ ಸಹ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಬೆಳಗ್ಗಿನ ನಮಾಝಿಗೆಂದು ಮಸೀದಿಗೆ ಹೋಗುತ್ತಿದ್ದಂತಹ ಇಕ್ಬಾಲ್ ಎಂಬುವವರು ಈ ಘಟನೆಯನ್ನು ಕಂಡು ತಕ್ಷಣ ಕೂಗಲತೆ ದೂರದಲ್ಲಿದ್ದ ಕಿನ್ನಿಪದವು ಮಸೀದಿಗೆ ತೆರಳಿ ಅಲ್ಲಿದ್ದ ಯುವಕರಲ್ಲಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಪಾಪ್ಯುಲರ್ ಫ್ರಂಟ್ ಸಂಘಟನೆಯ ಆಂಬ್ಯುಲೆನ್ಸ್ ನೊಂದಿಗೆ ಕಾರ್ಯಕರ್ತರಾದ ಆಸಿಫ್ ಮತ್ತು ಆಝರ್ ಎಂಬವರು ಸ್ಥಳಕ್ಕಾಗಮಿಸಿ ಗಾಯಳುಗಳನ್ನು ಕ್ಷಣಾರ್ಧದಲ್ಲೆ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಇದರಿಂದ ಅರೆ ಪ್ರಜ್ಞಾವಸ್ತೆಯಲ್ಲಿ ಬಿದ್ದಿದ್ದ ಗಾಯಳು ಜಗದೀಶ್ ಪ್ರಾಣಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಸಹಸವಾರ ಯಾವುದೆ ಪ್ರಾಣಪಾಯವಿಲ್ಲದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಪಾಪ್ಯುಲರ್ ಫ್ರಂಟ್ ಸಂಘಟನೆಯ ಕಾರ್ಯಕರ್ತರು ಗಾಯಾಳುವಿನ ಕುಟುಂಬಿಕರನ್ನು ಸಂಪರ್ಕಿಸಿ ತಮ್ಮ ಕೈಲಾಗುವಷ್ಟು ಸಹಾಯ ಮಾಡಿದರು.