(ನ್ಯೂಸ್ ಕಡಬ) newskadaba.com ಮ0ಗಳೂರು ಮೇ.26. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ರಾಜ್ಯ ಸರಕಾರವು ಹಲವಾರು ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಜಿಲ್ಲೆಯ 29 ಶಿಬಿರಗಳಲ್ಲಿ 3694 ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲಾಗಿದ್ದು, ಗುರುತಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ. ಗುರುತಿಸಿರುವ ಎಲ್ಲಾ ಅರ್ಹ ಸಂತ್ರಸ್ತರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. 25 % ರಿಂದ 59 % ರಷ್ಟು ಅಂಗವಿಕಲತೆಯುಳ್ಳವರು 765 ಸಂತ್ರಸ್ತರಿಗೆ ತಲಾ ಮಾಸಿಕ ರೂ 1500/- ರಂತೆ, 60% ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ 2251 ಸಂತ್ರಸ್ತರಿಗೆ ತಲಾ ಮಾಸಿಕ ರೂ 3000/- ರಂತೆ ಮಿತವೇತನವನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಬೆಂಗಳೂರು ಇವರಿಂದ ಪ್ರತಿ ಮಾಸಿಕಕ್ಕೆ ಅಂದಾಜು ರೂ. 80 ಲಕ್ಷದವರೆಗೆ ಪಾವತಿಸಲಾಗುತ್ತಿದೆ.
ಪ್ರತಿ ತಿಂಗಳಲ್ಲಿ ಖಾಸಗಿ ವೈದ್ಯಕೀಯ ವiಹಾವಿದ್ಯಾಲಯಗಳ ಸಹಯೋಗದೊಂದಿಗೆ ಜಿಲ್ಲೆಯ 6 ಕೇಂದ್ರಗಳಲ್ಲಿ ವಿಶೇಷ ತಜ್ಞರ ಶಿಬಿರಗಳನ್ನು ನಡೆಸಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ವೈದ್ಯಕೀಯ ತಪಾಸಣಾ ಪುಸ್ತಕಗಳನ್ನು ನೀಡಲಾಗಿದೆ. ಇದರಲ್ಲಿ ಆಹಾರ ಪದ್ಧತಿ ಹಾಗೂ ಮುಖ್ಯ ದೂರವಾಣಿ ಸಂಖ್ಯೆಗಳನ್ನು ನಮೂದಿಸಲಾಗಿದೆ. 2017-18 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಮತ್ತು ಕೊೈಲದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರವನ್ನು ಹೊರಗುತ್ತಿಗೆ ಆಧಾರದಲ್ಲಿ ಸರ್ಕಾರೇತರ ಸಂಸ್ಥೆ (ಓಉಔ) ಆದ ಮೇ|| ಸೇವಾ ಭಾರತಿ (ರಿ) ಮಂಗಳೂರು, ಬಾಲಮಾರುತಿ ವ್ಯಾಯಾಮ ಮಂಡಲ, ವಿ.ಟಿ.ರಸ್ತೆ, ಮಂಗಳೂರು ಇವರಿಂದ ನಡೆಸಲಾಗುತ್ತಿದೆ. ಹಾಗೂ ಹೆಚ್ಚುವರಿ 4 ಪಾಲನಾ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ .
ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿ ಹಾಸಿಗೆ ಹಿಡಿದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮನೆ ಭೇಟಿ ಮಾಡಿ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ 4 ಸಂಚಾರಿ ಆರೋಗ್ಯ ಘಟಕವನ್ನು ವಿಟ್ಲ/ಮೂಡಬಿದ್ರೆ, ಪುತ್ತೂರು, ಬೆಳ್ತಂಗಡಿ, ಬೆಳ್ಳಾರೆ (ಸುಳ್ಯ) ಇಲ್ಲಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರರಿಗೂ ಹಾಗೂ ಇತರರಿಗೂ ಫಿಸಿಯೋಥೆರಪಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 5 ಫಿಸಿಯೋಥೆರಪಿ ಘಟಕಗಳನ್ನು ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಸಾರ್ವಜನಿಕ ಆಸ್ಪತ್ರೆ ಪುತ್ತೂರು, ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸುಳ್ಯ ಇಲ್ಲಿ ಸ್ಥಾಪಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ 10 ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಶುಲ್ಕ ರಹಿತ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 2016-17 ರಲ್ಲಿ 148 ಸಂತ್ರಸ್ತರು ಚಿಕಿತ್ಸೆ ಪಡೆದಿರುತ್ತಾರೆ. ಇದಕ್ಕೆ ರೂ. 39,08,214 ಮೊತ್ತವನ್ನು ವ್ಯಯಿಸಲಾಗಿರುತ್ತದೆ. ಔಷಧಿ: ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರದ ಔಷಧವನ್ನು ಸಂತ್ರಸ್ತರ ಬೇಡಿಕೆಗೆ ಅನುಗುಣವಾಗಿ ಅತೀ ಶೀಘ್ರವಾಗಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ವಿತರಿಸಲಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ವಿಕಲಚೇತನರಿಗೆ ಚಲನೆಗಾಗಿ ವ್ಹೀಲ್ ಚೇರ್-142 ಸಂತ್ರಸ್ತರಿಗೆ, ಕ್ಯಾಲಿಪರ್ಸ್-208 ಸಂತ್ರಸ್ತರಿಗೆ ಮತ್ತು ಇತರ ಪರಿಕರಗಳನ್ನು ಎ.ಪಿ.ಡಿ ಸಂಸ್ಥೆಯ ಸಹಯೋಗದಿಂದ ನೀಡಲಾಗಿದೆ ಹಾಗೂ ಅತೀ ಅವಶ್ಯಕವಿರುವವರಿಗೆ ಸಾಧನ ಸಲಕರಣೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಚಿತ ಬಸ್ ಪಾಸ್: ಸಾಮಾನ್ಯ ಸಾರಿಗೆಯಲ್ಲಿ ಪ್ರಯಾಣಿಸಲು ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಾಯಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಿ ಬರಲು ಉಚಿತ ಬಸ್ ಪಾಸ್ ನೀಡಲು ಸರ್ಕಾರದ ಮಂಜೂರಾತಿ ನೀಡಲಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈಗಾಗಲೇ ಉಚಿತ ಬಸ್ ಪಾಸ್ ನೀಡಿರುತ್ತದೆ ಹಾಗೂ ಇದರ ಸದಪಯೋಗವನ್ನು ಎಂಡೋಸಲ್ಫಾನ್ ಸಂತ್ರಸ್ತರು ಪಡೆದುಕೊಳ್ಳುವಲ್ಲಿ ಇಲಾಖೆ ವತಿಯಿಂದ ಸಹಕಾರ ನೀಡಲಾಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಕೆ.ಎಫ್.ಡಿ. ಆಸ್ಪತ್ರೆ ಕಟ್ಟಡದಲ್ಲಿ ‘ಕೌಶಲ್ಯ ಅಭಿವೃದ್ಧಿ ಕೇಂದ್ರ’ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕಟ್ಟಡದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.ಶಾಶ್ವತ ಪುನರ್ವಸತಿ ಕೇಂದ್ರ: ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದಲ್ಲಿ 5.00 ಎಕರೆ ವಿಸ್ತೀರ್ಣದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ ಕುರಿತು ಅಂದಾಜು 1134.00 (ಮಾನವ ಸಂಪನ್ಮೂಲ ಹೊರತು ಪಡಿಸಿ) ಲಕ್ಷದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.