ಕರಾವಳಿ ಉತ್ಸವಕ್ಕೆ ಮೆರುಗು : ಬಾನಂಗಳದಲ್ಲಿ ಹಾರಾಡಲಿದೆ ಚಿತ್ತಾಕರ್ಷಕ ಗಾಳಿಪಟ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.4  ಈ ಸಾಲಿನ ಕರಾವಳಿ ಉತ್ಸವವು ಜನವರಿ 10ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ನಡೆಯಲಿದೆ. ಕರಾವಳಿ ಉತ್ಸವದ ಕೊನೆಯ ಮೂರು ದಿನ ಜನವರಿ 17ರಿಂದ 19ರವರೆಗೆ ಪಣಂಬೂರು ಬೀಚ್‍ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ದೇಶದ ನುರಿತ ಗಾಳಿಪಟ ಕ್ರೀಡಾಳುಗಳೊಂದಿಗೆ ಹಲವು ವಿದೇಶೀ ರಾಷ್ಟ್ರಗಳ ಗಾಳಿಪಟ ಕ್ರೀಡಾಳುಗಳೂ ಭಾಗವಹಿಸಿ, ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.

ಈಗಾಗಲೇ ಹಲವು ರಾಷ್ಟ್ರಗಳ ಗಾಳಿಪಟ ಕ್ರೀಡಾಳುಗಳು ಮಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಆಗಮಿಸಲು ಒಪ್ಪಿಕೊಂಡಿದ್ದು, ಸಿದ್ಧತೆಗಳು ನಡೆಯುತ್ತಿವೆ. ವಿದೇಶೀ ಗಾಳಿಪಟ ಹಾರಾಟಗಾರರು ಜಗತ್ತಿನ ವಿವಿದೆಡೆ ನಡೆದ ಹಲವಾರು ಪ್ರಮುಖ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದು, ಗಾಳಿಪಟದ ವಿಷಯ ಆಯ್ಕೆ ಹಾಗೂ ವಿನ್ಯಾಸದಲ್ಲಿ ನುರಿತ ಪರಿಣತಿಯನ್ನು ಹೊಂದಿದ್ದಾರೆ. ಸಿಂಗಾಪುರ, ಕಾಂಬೋಡಿಯಾ, ಇಂಡೋನೇಶ್ಯಾ, ಫಿಲಿಪೈನ್ಸ್, ಸ್ಕಾಟ್‍ಲ್ಯಾಂಡ್, ತುರ್ಕಿ, ಥಾಯ್‍ಲ್ಯಾಂಡ್, ನೆದರ್ ಲ್ಯಾಂಡ್, ಹಾಲೆಂಡ್ ದೇಶದ ಗಾಳಿಪಟ ಹಾರಾಟಗಾರರು ಕರಾವಳಿ ಉತ್ಸವದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ಜೂರಿಚ್ ರಾಷ್ಟ್ರದ ಗಾಳಿಪಟ ಹಾರಾಟಗಾರರು ಭಾಗವಹಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಜಿಲ್ಲಾಡಳಿತ ವತಿಯಿಂದ ಈಗಾಗಲೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಯಶಸ್ಸಿಗೆ ಉಪಸಮಿತಿ ರಚಿಸಲಾಗಿದೆ. ಕ್ರೀಡಾಳುಗಳ ಪ್ರಯಾಣ, ವಸತಿ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆಗಳು ನಡೆಯುತ್ತಿವೆ.

Also Read  ಚಿರತೆಯ ಬೆನ್ನಲ್ಲೇ ಕಾಡುಕೋಣಗಳ ಹಾವಳಿ...! ➤ ಪುತ್ತೂರಿನಲ್ಲಿ ಗದ್ದೆಗೆ ದಾಳಿ ಮಾಡಿ ಅಪಾರ ಪೈರು ನಾಶಮಾಡಿದ ಕಾಡುಕೋಣ

Nk Kukke

ಈ ಸಾಲಿನ ಕರಾವಳಿ ಉತ್ಸವವು ಜನವರಿ 10ರಿಂದ ಪ್ರಾರಂಭವಾಗಲಿದ್ದು, ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರಾವಳಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿರಬೇಕು. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‍ನಲ್ಲಿ ಏರ್ಪಡಿಸಲು ನಿಗದಿಪಡಿಸಲಾಗಿದೆ. ಕಲಾವಿದರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲರೀತಿಯ ಸಿದ್ಧತೆಗಳನ್ನು ಒದಗಿಸಲು ಸೂಚಿಸಿದರು. ಕರಾವಳಿ ಉತ್ಸವದ ಆರಂಭದ ದಿನ ಜನವರಿ 10ರಂದು ಸಾಂಸ್ಕೃತಿಕ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಇದರಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವರು ಕರೆ ನೀಡಿದರು. ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‍ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಶೌಚಾಲಯ ಸೇರಿದಂತೆ ಎಲ್ಲಾರೀತಿಯ ಮೂಲಭೂತ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಉಪವಿಭಾಗಾಧಿಕಾರಿ ಮದನ್ ಮೋಹನ್, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್‍ಕುಮಾರ್, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ನರೇಂದ್ರ ನಾಯಕ್, ಯತೀಶ್ ಬೈಕಂಪಾಡಿ, ಗೌರವ್ ಹೆಗ್ಡೆ, ನಿಸರ್ಗ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Also Read  ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ

 

error: Content is protected !!
Scroll to Top