ಹತೋಟಿಗೆ ಬಾರದ ಪ್ರತಿಭಟನೆಯ ಕಿಚ್ಚು ➤ ಮಂಗಳೂರಿನಲ್ಲಿ ಕರ್ಫ್ಯೂ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.19. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲೂ ಪ್ರತಿಭಟನೆಯ ಕಾವು ತೀವ್ರಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ ಬಳಿ ಸಾವಿರಕ್ಕೂ ಅಧಿಕ ಮಂದಿ ಜಮಾಯಿಸಿದ್ದು, ಪ್ರತಿಭಟನೆ ತೀವ್ರರೂಪ ಪಡೆಯುತ್ತಿರುವುದನ್ನು ಮನಗಂಡ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಲಾಠಿಚಾರ್ಜ್ ಬೆನ್ನಲ್ಲೇ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನದತ್ತಲೂ ಕಲ್ಲು ತೂರಾಟ ನಡೆಸಲಾಗಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಆದರೂ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮಾಜಿ ಮೇಯರ್ ಅಶ್ರಫ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಂದರ್, ಕದ್ರಿ, ಬರ್ಕೆ, ಉರ್ವ, ಪಾಂಡೇಶ್ವರ ಪ್ರದೇಶಗಳನ್ನು ಒಳಗೊಂಡ ಮಂಗಳೂರು ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷಾ ತಿಳಿಸಿದ್ದಾರೆ.

Also Read  ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಮೃತ್ಯು, ಮೂವರಿಗೆ ಗಾಯ...!!!!

error: Content is protected !!
Scroll to Top