ಕುಂದಾಪುರ, ಡಿ.17: ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದ ಅಮಾನವೀಯ ಕೃತ್ಯ ಕುಂದಾಪುರ ನೇರಳಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕೊಲೆಯಾದವರನ್ನು ನೇರಳಕಟ್ಟೆ ವಾಲ್ತೂರು ಸಮೀಪದ ಜೋರ್‌ಮಕ್ಕಿ ನಿವಾಸಿ ನರಸಿಂಹ ಶೆಟ್ಟಿ ಎಂಬವರ ಪುತ್ರ ಬಾಬುಶೆಟ್ಟಿ(55) ಎಂದು ಗುರುತಿಸಲಾಗಿದೆ. ಬಾಬು ಶೆಟ್ಟಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ತನ್ನ ಮನೆಯಾದ ಜೋರ್‌ಮಕ್ಕಿಯಿಂದ ಕುಂದಾಪುರ್‍ಕಕೆ ಹೋಗಿ ಬರುವುದಾಗಿ ಹೇಳಿ ತನ್ನ ಬೈಕಿನಲ್ಲಿ ತೆರಳಿದ್ದರು ಎನ್ನಲಾಗಿದೆ. ಆದರೆ ಮಧ್ಯಾಹ್ನ 12.30ರ ಸುಮಾರಿಗೆ ಅವರ ರಕ್ತಸಿಕ್ತ ದೇಹ ಜಾಡಿಯ ಕಲ್ಕಂಬದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳವನ್ನು ವೀಕ್ಷಿಸಿದಾಗ ಬಾಬು ಶೆಟ್ಟಿ ಕೊಲ್ಲೂರು ಹೆಮ್ಮಾಡಿ ರಸ್ತೆಯಿಂದ ಹಟ್ಟಿಯಂಗಡಿ ರಸ್ತೆಗೆ ಸಂಪರ್ಕಿಸುವ ಜಾಡಿ ಬೈಪಾಸ್ ರಸ್ತೆಯಲ್ಲಿ ತೆರಳಿದ್ದು, ಹಿಂದಿನಿಂದ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದಿರುವ ಶಂಕೆ ದಟ್ಟವಾಗಿ ಕಾಣಿಸುತ್ತಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಬಾಬು ಶೆಟ್ಟಿ ಕಲ್ಕಂಬದಲ್ಲಿ ಮಣ್ಣಿನ ರಸ್ತೆಯಲ್ಲಿ ತೆರಳಿರಬಹುದು ಎನ್ನಲಾಗಿದ್ದು, ಇದೇ ಸಂದರ್ಭ ಅವರನ್ನು ಹತ್ಯೆ ನಡೆಸಿ ಪರಾರಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದ್ದು, ಹತ್ಯೆ ನಡೆಸಿರುವುದು ದೃಢವಾಗಿದೆ.
ಬಾಬು ಶೆಟ್ಟಿಗೆ ಬಡ್ಡಿ ವ್ಯವಹಾರವಿದ್ದು, ಇದರಿಂದ ಅವರಿಗೆ ದ್ವೇಷಿಗಳಿದ್ದರು ಎಂದು ಸಮೀಪವರ್ತಿಗಳು ಹೇಳಿದ್ದಾರೆ. ಅಲ್ಲದೇ ಇವರ ಹಾಗೂ ಇವರ ತಂಗಿಯ ನಡುವೆ ಜಾಗದ ವಿವಾದಗಳೂ ಇದ್ದವು ಎಂದು ಬಾಬು ಶೆಟ್ಟಿ ಸಹೋದರರು ಹೇಳಿದ್ದಾರೆ ಎಂದು ಉಡುಪಿ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಆದರೆ ಹತ್ಯೆ ಯಾವ ಕಾರಣಕ್ಕೆ ಆಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಬಾಬು ಶೆಟ್ಟಿ ವಿವಾಹಿತರಾಗಿದ್ದು, ಪತ್ನಿ ಹಾಗೂ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಸಂಜೆ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ಹಾಗೂ ಫೊರೆನ್ಸಿಕ್ ತಜ್ಞರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಹರಿರಾಂ ಶಂಕರ್, ವೃತ್ತ ನಿರೀಕ್ಷಕ ಮಂಜಪ್ಪ. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಮೊದಲಾದವರು ಕೃತ್ಯ ನಡೆದ ಸ್ಳಕ್ಕೆ ಭೇಟಿ ನೀಡಿದ್ದಾರೆ. ಕಂಡ್ಲೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.