ಚಿಕ್ಕಮ್ಮನ ಮದುವೆಗೆಂದು ಬಂದಿದ್ದ ಪುಟ್ಟ ಮಗು ಕೆರೆಗೆ ಬಿದ್ದು ಮೃತ್ಯು ➤ ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮಗುವೊಂದು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಮೃತ ಮಗುವನ್ನು ಪುತ್ತೂರು ತಾಲೂಕು ಆರ್ಲಪದವು ನಿವಾಸಿ ಗುರುರಾಜ್ ಹಾಗೂ ಗೀತಾ ದಂಪತಿಗಳ ಪುತ್ರಿ ಚಿಂತನಾ(3ವ) ಎಂದು ಗುರುತಿಸಲಾಗಿದೆ. ಮಗುವಿನ ತಾಯಿಯ ಸಹೋದರಿಯ ಮದುವೆಯು ಗುರುವಾರದಂದು ಆಲಂಕಾರು ಗ್ರಾಮದ ನಗ್ರಿಯಲ್ಲಿ ನಡೆದಿತ್ತು. ಮದುವೆ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಗುರುರಾಜ್ ದಂಪತಿಗಳು ಆಗಮಿಸಿದ್ದರು. ಶನಿವಾರ ನಗ್ರಿಯಲ್ಲಿ ಬೀಗರ ಔತಣ ಕೂಟ ನಡೆಯಲಿದ್ದ ಕಾರಣ ಮಗುವಿನ ತಂದೆ ತಾಯಿ ಸಂಜೆ ಮತ್ತೆ ಮನೆಗೆ ಬರುವುದಾಗಿ ತಿಳಿಸಿ ಮಗುವನ್ನು ಅಜ್ಜಿಯ ಮನೆಯಲ್ಲೇ ಬಿಟ್ಟು ಶುಕ್ರವಾರ ಬೆಳಿಗ್ಗೆ ಆರ್ಲಪದವಿಗೆ ತೆರಳಿದ್ದರು.

Also Read  ಮಂಗಳೂರು: ಚುನಾವಣಾ ಸಿಬ್ಬಂದಿಗೆ ತರಬೇತಿ


ಅಜ್ಜಿಯ ಮನೆಮಂದಿ ಶನಿವಾರದ ಬೀಗರ ಔತಣ ಕೂಟಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಮಗು ಆಟವಾಡಿಕೊಂಡು ಅಂಗಳದ ಬದಿಯಲ್ಲಿದ್ದ ಕೆರೆಗೆ ಬಿದ್ದಿದೆ. ಕೆಲ ಹೊತ್ತು ಮಗು ನೀರಿಗೆ ಬಿದ್ದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಮಗು ಕಾಣಿಸದಿದ್ದ ವೇಳೆ ಹುಡುಕಾಡಿದ ಮಗುವಿನ ಅಂಗಿಯ ಒಂದು ಭಾಗ ಕೆರೆಯ ನೀರಿನ ಒಳಗೆ ಕಾಣಿಸುತ್ತಿತ್ತು. ತಕ್ಷಣ ಮಗುವನ್ನು ಮೇಲಕ್ಕೆತ್ತಿ ಆಲಂಕಾರಿನ 108 ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಮಗು ಕೊನೆಯುಸಿರೆಳೆಯಿತೆಂದು ತಿಳಿದು ಬಂದಿದೆ.


ಮಗು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಸೇರಿದಂತೆ ಸಹೋದರನನ್ನು ಅಗಲಿದೆ. ಮಗುವಿನ ಪೊಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಗುವಿನ ಪಾರ್ಥಿವ ಶರೀರವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆರ್ಲಪದವಿನಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Also Read  ನಾಳೆ (ಜು. 05) ಕಡಬ ತಾಲೂಕು ಕಛೇರಿಯಲ್ಲಿ ಜಿಲ್ಲಾಧಿಕಾರಿ ಲಭ್ಯ ➤ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

error: Content is protected !!
Scroll to Top