ಮಂಗಳೂರು: ಈರುಳ್ಳಿ ದರ ಏರಿಕೆ ವಿರುದ್ಧ ‘ನೇಣು ಹಗ್ಗ’ ಪ್ರದರ್ಶಿಸಿ ವಿನೂತನ ಪ್ರತಿಭಟನೆ

ಮಂಗಳೂರು, ಡಿ.5: ಈರುಳ್ಳಿ ದರ ನಿಯಂತ್ರಿಸಲಾಗದ ಕೇಂದ್ರ ಸರಕಾರದ ನೀತಿಯಿಂದ ಸಂಕಷ್ಟಕ್ಕೀಡಾದ ಗ್ರಾಹಕರು ಮತ್ತು ಕಾರ್ಮಿಕರ ರಕ್ಷಣೆಗೆ ಆಗ್ರಹಿಸಿ ಬಂದರು ಶ್ರಮಿಕರ ಸಂಘದಿಂದ ನಗರದ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಗುರುವಾರ ‘ನೇಣು ಹಗ್ಗ’ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್, ಐದು ತಿಂಗಳ ಹಿಂದೆ ಕೆಲವು ರಾಜ್ಯಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಈರುಳ್ಳಿ ದರ ಏರಿಕೆಯಾಗಿದೆ. ಇದರಿಂದಾಗಿ ಮಂಗಳೂರಿಗೆ ಈರುಳ್ಳಿ ಸರಬರಾಜು ಆಗುತ್ತಿಲ್ಲ. ದರ ಏರಿಕೆಯು ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿದೆ. ಏರಿಕೆ ದರ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಮಂಗಳೂರು ಬಂದರಿನಲ್ಲಿ ಪ್ರತಿನಿತ್ಯ ೮ರಿಂದ ೧೦ ಲೋಡ್ ಈರುಳ್ಳಿಯನ್ನು ಕಾರ್ಮಿಕರು ಅನ್‌ಲೋಡ್ ಮಾಡುತ್ತಿದ್ದರು. ಅಂದರೆ ೨೦ರಿಂದ ೨೫ ಟನ್ ಈರುಳ್ಳಿ ಮಂಗಳೂರಿಗೆ ಬರುತ್ತಿತ್ತು. ಆದರೆ, ಈಗ ೫ ಟನ್ ಈರುಳ್ಳಿ ಕೂಡ ಬರುತ್ತಿಲ್ಲ. ಇದರಿಂದ ಒಂದು ತಿಂಗಳಿಂದ ಕಾರ್ಮಿಕರಿಗೂ ಕೆಲಸ ಇಲ್ಲದಾಗಿದೆ. ಕೆಲವು ದಿನ ಕಾರ್ಮಿಕರು ಬರಿಗೈಯಲ್ಲಿ ಮನೆಗೆ ವಾಪಸಾಗುತ್ತಿರುವ ಪರಿಸ್ಥಿತಿ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Also Read  ವಿಜೃಂಭಣೆಯಿಂದ ನಡೆಯುತ್ತಿರುವ ಇಚಿಲಂಪಾಡಿ ಸಂತ ಜಾರ್ಜ್ ಚರ್ಚ್‌ನ ವಾರ್ಷಿಕ ಹಬ್ಬ ► ಉರುಳು ಸೇವೆ, ಮೊಣಕಾಲು ನಡಿಗೆ ಸೇರಿದಂತೆ ಹಲವು ಹರಕೆಗಳ ಕಾರಣಿಕ ಕ್ಷೇತ್ರ

ಕೇಂದ್ರ ಸರಕಾರದ ಅಧೀನ ಇಲಾಖೆಗಳು ಈರುಳ್ಳಿ ದರ ಇಳಿಕೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ತೊಂದರೆಗೊಳಗಾಗಿರುವ ಕಾರ್ಮಿಕರ ರಕ್ಷಣೆ ಆಗುತ್ತಿಲ್ಲ. ನಷ್ಟ ಹೊಂದಿ ತತ್ತರಿಸಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿಯುವ ದುಃಸ್ಥಿತಿ ನಿರ್ಮಾಣವಾಗಿದೆ. ರೈತರ ಬೆಳೆಗಳನ್ನೇ ನಂಬಿಕೊಂಡಿರುವ ಕಾರ್ಮಿರ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ ಎಂದು ನೋವು ತೋಡಿಕೊಂಡರು.

ಉತ್ಪಾದನಾ ಕ್ಷೇತ್ರಗಳು ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ವಿಪರೀತವಾಗುತ್ತಿದೆ. ಯುವಕರು ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಉಪಾಧ್ಯಕ್ಷ ಹಸನ್ ಮೋನು, ಖಜಾಂಚಿ ಹರೀಶ್ ದೇರೆಬೈಲ್, ಕಾರ್ಮಿಕರಾದ ಯಲ್ಲಪ್ಪಉಮರ್ ಫಾರೂಕ್, ಹಂಝ, ಬಶೀರ್, ಸಿದ್ದೀಕ್, ಶರೀಫ್, ಸಮೀರ್ ಮತ್ತಿತರರು ಭಾಗವಹಸಿದ್ದರು.

error: Content is protected !!
Scroll to Top