(ನ್ಯೂಸ್ ಕಡಬ) newskadaba.com ಮಂಗಳೂರು ನ.27. ಇಲ್ಲಿನ ಪ್ರತಿಷ್ಟಿತ ವಿದ್ಯಾರ್ಥಿ ಸಂಘ “ಅಸ್ಸುಫ್ಫಾ ಫೌಂಡೇಶನ್” ಇದರ ವತಿಯಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮತಿಂಗಳ ಭಾಗವಾಗಿ ನಗರದ ಕಾಪಿಕಾಡ್ ನಲ್ಲಿ ನೂರಾರು ಏಡ್ಸ್ ಪೀಡಿತ ಹಾಗೂ ಅಂಗವಿಕಲತೆಯಿಂದ ನರಳುವ ಮಕ್ಕಳನ್ನು ದೈನಂದಿನವಾಗಿ ಸ್ವಂತ ಮಕ್ಕಳಂತೆ ಸಾಕಿ ಸಲಹುತ್ತಿರುವ “ಸ್ನೇಹದೀಪ್” ಸಂಸ್ಥೆಗೆ ತೆರಳಿ ಅಲ್ಲಿನ ಮಕ್ಕಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿ ಆಚರಿಸಲಾಯಿತು.
ಸ್ನೇಹದೀಪ್ ಸಂಸ್ಥೆ ಮಂಗಳೂರಿನಲ್ಲೇ ಕಾರ್ಯಾಚರಿಸುತ್ತಿದ್ದು, ಅಲ್ಲಿಗೆ ಬೇಕಾದಷ್ಟು ಸಹಾಯ ಸಹಕಾರಗಳು ಸಿಗದೇ ಇದ್ದರೂ ದೊಡ್ಡ ಮಟ್ಟದ ಯೋಜನೆಯನ್ನು ಕೈಗೆತ್ತಿಕೊಂಡು ಮುಂದುವರಿಯುತ್ತಿದೆ. ತಬಸ್ಸುಮ್ ಎಂಬಾಕೆಯ ನಾಯಕತ್ವದಲ್ಲಿ ನಡೆಯುವ ಈ ಮಹತ್ ಯೋಜನೆ ಮೆಚ್ಚಲೇಬೇಕಾದದ್ದು.
ರೋಗಿಗಳಿಗೆ ಸಾಂತ್ವನ ನೀಡುವುದು ಹಾಗೂ ಅವರಿಗಾಗಿ ಸಹಾಯ ಹಸ್ತವನ್ನು ಚಾಚುವುದು ಪುಣ್ಯಾರ್ಹವಾದ ಸತ್ಕರ್ಮವೆಂದು ಕಲಿಸಿದ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ರವರು ಬಡವರಿಗೂ ರೋಗಿಗಳಿಗೂ ಸಾಂತ್ವನ ನೀಡಿದ್ದರು. ಆ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಹೆಸರಿನಲ್ಲಿ ಎಚ್ಐವಿ ಪೀಡಿತರಿಗೆ ಸಾಂತ್ವನ ನೀಡಿ ಅಲ್ಲಿನ ಬಡ ನಿರ್ಗತಿಕ ರೋಗಿಗಳಾದ ಮಕ್ಕಳಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಕೊಟ್ಟು ಅವರ ಕಣ್ಣೀರೊಪ್ಪಿ ಪ್ರವಾದಿಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಸ್ಸುಫ್ಫಾ ಸಂಘಟನೆಯ ಚೇರ್ ಮ್ಯಾನ್ ಅಬ್ದುರ್ರಶೀದ್ ಸಅದಿ ಬೋಳಿಯಾರ್ ಹಾಗೂ ಅಸ್ಸುಪ್ಫಾ ಕಾರ್ಯಕರ್ತರು ಭಾಗಿಯಾಗಿದ್ದರು.