(ನ್ಯೂಸ್ ಕಡಬ) newskadaba.com ಕಡಬ, ಅ.19. ಕೇಂದ್ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಶುಕ್ರವಾರ ಕಡಬ ತಹಶೀಲ್ದಾರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ದೇಶದ್ಯಾಂತ ಆರ್ಥಿಕ ಹಿಂಜರಿತದಿಂದಾಗಿ ಉತ್ಪಾದನಾ ಕ್ಷೇತ್ರ ಕುಸಿದಿದ್ದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಸಹ ನಡೆದಿವೆ. ಆರ್ಥಿಕ ಸಂಕಷ್ಟಕ್ಕಿಡಾಗಿರುವ ಇಂತಹ ದುಸ್ಥಿತಿಯ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುತ್ತಿದೆ. ಈ ಅವೈಜ್ಞಾನಿಕ ಮತ್ತು ಜನ ವಿರೋಧಿ ಕಾಯ್ದೆಯಿಂದ ಜನ ಸಾಮಾನ್ಯರಿಗೆ ಆರ್ಥಿಕ ಹೊಡೆತ ಬೀಳುತ್ತಿದ್ದು, ಎಷ್ಟೋ ಮಂದಿ ದಂಡ ಕಟ್ಟಲಾಗದೆ ತಮ್ಮ ವಾಹನವನ್ನೇ ಪೆÇಲೀಸರ ಕೈಗೆ ಒಪ್ಪಿಸಿ ಹೋಗಿರುವ ನಿದರ್ಶನವಿದೆ. ಸಂಚಾರ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ಗರಿಷ್ಠ ದಂಡವೇ ಮಾರ್ಗ ಎಂದು ಕೇಂದ್ರ ಸರ್ಕಾರ ಯೋಚಿಸಿರುವುದು ಶೋಚನೀಯವಾಗಿದೆ. ಅಪಘಾತಗಳಿಗೆ ಕೇವಲ ಸಂಚಾರಿ ನಿಯಮ ಉಲ್ಲಂಘನೆ ಮಾತ್ರ ಕಾರಣವಲ್ಲ ಎಂಬ ಕನಿಷ್ಠ ಜ್ಞಾನ ಸರ್ಕಾರಕ್ಕೆ ಇಲ್ಲ. ಇಂದಿಗೂ ದೇಶದ ಶೇ.80ಕ್ಕೂ ಹೆಚ್ಚು ರಸ್ತೆಗಳಲ್ಲಿ ಗುಂಡಿಗಳು ಕಾಣಲು ಸಿಗುತ್ತದೆ. ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ, ರಸ್ತೆಗಳ ತಿರುವುಗಳು ಅವೈಜಾÐನಿಕವಾಗಿ ನಿರ್ಮಿಸಲಾಗಿದೆ. ಈ ರೀತಿಯಾಗಿ ಹೆದ್ದಾರಿಗಳು ಮೃತ್ಯುಕೂಪವಾಗಿ ಬದಲಾಗಿವೆ. ರಸ್ತೆಯಂತಹ ಮೂಲಭೂತ ಸೌಕರ್ಯವನ್ನು ಮೊದಲಾಗಿ ಸರಿಪಡಿಸುವ ಕೆಲಸ ಜವಬ್ದಾರಿಯುತ ಸರಕಾರಿದಿಂದ ಆಗಬೇಕಾಗಿದೆ. ಕರ್ನಾಟಕದಲ್ಲಿ ನೂತನ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸಿ ರಸ್ತೆಗಳನ್ನು ಉನ್ನತ್ತೀಕರಿಸಬೇಕು. ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟಗಳನ್ನು ಅನುಭವಿಸುತ್ತಿರುವ ಕುಟುಂಬಗಳಿಗೆ ಕೂಡಲೇ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಎಸ್‍ಡಿಪಿಐ ಕಡಬ ತಾಲೂಕು ಸಮಿತಿ ಅಧ್ಯಕ್ಷ ರಮ್ಲ ಸನ್‍ರೈಸ್, ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ, ಕೋಶಾಧಿಕಾರಿ ಹಾರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಸ್‍ಡಿಪಿಐ ತಾಲೂಕು ಸಮಿತಿ ಸದಸ್ಯ ನೌಶದ್ ಸ್ವಾಗತಿಸಿದರು. ಗ್ರಾಮ ಸಮಿತಿ ಸದಸ್ಯ ಅಬ್ದುಲ್ ನಬಿ ವಂದಿಸಿದರು. ಪ್ರತಿಭಟನಾ ಸಭೆಯ ಬಳಿಕ ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್ ರೋಡ್ರಿಗಸ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.