ಬೆಂಗಳೂರು: ನಾನಂದು ನಮ್ಮೂರಿಗೆ ಹೋಗುವ ಸಿದ್ದತೆಯಲ್ಲಿದ್ದೆ. ಮಾರನೆಯ ದಿನ ಬೆಳಿಗ್ಗೆ ಮಂಜೇಶ್ವರದಲ್ಲಿ ಕಾರ್ಯಕ್ರಮವಿದ್ದಿದ್ದರಿಂದ ಸಂಜೆ ಬೇಗ ಆಫೀಸು ಮುಗಿಸಿ ಹೋಗಲು ನಿರ್ಧರಿಸಿದ್ದೆ. ತರಾತುರಿಯಲ್ಲಿ ಕೆಲಸವನ್ನು ಮುಗಿಸಿ ಬೆಂಗಳೂರಿನ ಪೀಣ್ಯದಿಂದ ಹೊರಟಾಗ ಸಂಜೆ ಐದೂವರೆಯಾಗಿತ್ತು. ನಾನೊಬ್ಬನೇ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟೆ. ಅಂದು ಮಂಗಳವಾರವಾದ್ದರಿಂದ ಬೆಂಗಳೂರು ಹೊರವಲಯದಿಂದ ಮುಂದೆ ಜಾಸ್ತಿ ಟ್ರಾಫಿಕ್ ಇರಲಿಲ್ಲ. ಸಕಲೇಶಪುರ ದಾಟಿ ಶಿರಾಡಿ ಘಾಟನ್ನು ಇಳಿಯಲಾರಂಭಿಸಿದಾಗ ಗಂಟೆ ಒಂಭತ್ತಾಗಿತ್ತು. ಆಗಸದಲ್ಲಿ ಚಂದಿರನ ಸುಳಿವಿರಲಿಲ್ಲ. ವಾಹನ ಓಡಾಟವೂ ತುಂಬಾ ವಿರಳವಾಗಿತ್ತು. ರಾತ್ರಿಯ ಪ್ರಯಾಣವನ್ನು ಒಂಟಿಯಾಗಿ ಆಸ್ವಾದಿಸುತ್ತಾ ತಿರುವುಗಳ ಘಾಟಿ ರಸ್ತೆಯಲ್ಲಿ ಮುಂದೆ ಧಾವಿಸುತ್ತಿದ್ದೆ. ಸುಮಾರು ಗುಂಡ್ಯದ ಹತ್ತಿರ ಬಂದಿರಬಹುದು. ಎದುರುಗಡೆಯಿಂದ ಅಥವಾ ಹಿಂದಿನಿಂದ ಯಾವ ವಾಹನದ ಸುಳಿವೂ ಇರಲಿಲ್ಲ. ಇಕ್ಕೆಲಗಳಲ್ಲಿನ ಪರ್ವತಶ್ರೇಣಿಗಳ ಇರುವಿಕೆಯನ್ನು ಮರೆಮಾಚಿದಂತೆ ಭೂಮ್ಯಾಕಾಶವನ್ನು ಒಂದು ಮಾಡಿ ನಿಂತ ಕಾನನದ ಬೃಹದಾಕಾರಾದ ವೃಕ್ಷಗಳ ನಡುವಿನ ಆ ಭಯಾನಕ ನಿರ್ಜನ ರಸ್ತೆಯಲ್ಲಿ ನಾನೊಬ್ಬನೇ ಕಾರಲ್ಲಿ ಆನಂದಮಯವಾಗಿ ಹೋಗುತ್ತಿದ್ದೆ. ರಸ್ತೆಯ ಎಡಭಾಗದ ಕಂದಕದ ತಲದಲ್ಲಿ ಸಲಿಲೆ ನೇತ್ರಾವತಿಯು ಮಂದಗಾಮಿನಿಯಾಗಿ ಹರಿಯುತ್ತಿದ್ದಳು. ಆ ಗಾಢಾಂಧಕಾರದ ಪರಿಸರದಲ್ಲಿ ಮಂದಮಾರುತನು ಸುಯ್ಯುಗುಡುತ್ತಾ ಆ ನೀರವತೆಯನ್ನು ಮುರಿಯುತ್ತಿದ್ದ.
ಇದ್ದಕ್ಕಿದ್ದಂತೆ ಎದುರು ಕಾಣುವ ತಿರುವಿನ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಿರುವುದು ಕಾಣಿಸಿತು. ಹತ್ತಿರ ತಲುಪಿದಾಗ ನಿಂತವಳು ಒಬ್ಬಳು ಮಹಿಳೆಯೆಂದು ಗೊತ್ತಾಯಿತು. ಅವಳು ಮಗುವೊಂದನ್ನು ಎತ್ತಿಕೊಂಡಿದ್ದಳು. ಇಬ್ಬರ ಮೈಯಲ್ಲೂ ಗಾಯವಾಗಿ ರಕ್ತ ಸೋರುತ್ತಿತ್ತು. ಬಿಳಿ ವಸ್ತ್ರಾಭರಣೆಯಾದ ಆಕೆಯ ತಲೆಗೂದಲು ಕೆದರಿತ್ತು. ಭಯವಿಹ್ವಲತೆಯಲ್ಲಿ ಅವಳು ಏದುಸಿರು ಬಿಡುತ್ತಿದ್ದಳು. ಮಗು ಜೋರಾಗಿ ಚೀರುತ್ತಿತ್ತು. ಅವಳನ್ನುಳಿದು ಆ ಪರಿಸರ ನಿರ್ಮಾನುಷವಾಗಿತ್ತು. ನನ್ನನ್ನು ನೋಡಿದ ತಕ್ಷಣ ಆಕೆ ರಸ್ತೆಯ ಮಧ್ಯೆ ಓಡಿಬಂದು ನನ್ನ ಕಾರನ್ನು ನಿಲ್ಲಿಸುವಂತೆ ಸನ್ನೆ ಮಾಡಿದಳು. ಏನೋ ಅವಘಡವಾಗಿದೆಯೆಂದು ನನಗಾಗ ಅರಿವಾಯಿತು. ನಾನು ತಕ್ಷಣ ಬ್ರೇಕ್ ಹಾಗಿ ಕಾರನ್ನು ನಿಲ್ಲಿಸಿದೆ. ಆಕೆ ಹತ್ತಿರ ಬಂದು “ಸಾರ್, ಸಾರ್, ನಮ್ಮ ಕಾರು ಇಲ್ಲಿ ಕೆಳಗೆ ಪ್ರಪಾತಕ್ಕೆ ಬಿದ್ದಿದೆ, ನಮ್ಮೆಜಮಾನ್ರು ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ತುಂಬಾ ಪೆಟ್ಟಾಗಿದೆ! ಅವರನ್ನು ರಕ್ಷಿಸಲು ಸಹಾಯ ಮಾಡಿ, ಬೇಗ ಬನ್ನಿ…” ಎಂದು ಬೇಡಿಕೊಂಡಳು. ನಾನು “ಓ ಮೈ ಗಾಡ್!, ಬಂದೆ ಇರಿ” ಎಂದು ಆತುರದಲ್ಲಿ ಕಾರಿನಿಂದಿಳಿದು ನನ್ನ ಮೊಬೈಲ್ ಟಾರ್ಚನ್ನು ಹಾಕುತ್ತಾ ಅವಳನ್ನು ಅನುಸರಿಸಿದೆ. ಆಗ ಗಾಯಗೊಂಡಿರುವ ಆಕೆಯ ಮಗು ಅಳು ನಿಲ್ಲಿಸಿ ನನ್ನನ್ನು ನೋಡಿ ವಿಲಕ್ಷಣವಾಗಿ ನಕ್ಕಾಗ ನನಗೊಮ್ಮೆ ಗಲಿಬಿಲಿಯಾದರೂ ಸಾವರಿಸಿಕೊಂಡು ಆಕೆ ತೋರಿದ ಜಾಗದಲ್ಲಿ ಇಣುಕಿದೆ. ಆ ಕತ್ತಲಲ್ಲಿ ಏನೂ ಕಾಣಲಿಲ್ಲ. “ಸ್ವಲ್ಪ ಮುಂದೆ ಹೋಗಿ ನೋಡಿ ಸಾರ್. ಅಲ್ಲೇ ಪ್ರಪಾತದೊಳಗೆ ಬಿದ್ದಿದ್ದಾರೆ, ಮುಂದೆ ಬಗ್ಗಿ ನೋಡಿದಾಗ ಕಾಣಸಿಗುತ್ತಾರೆ..’ ಎಂದು ಆಕೆ ನನ್ನ ಹಿಂದಿನಿಂದ ಕಿವಿಯ ಹತ್ತಿರ ಮೆಲುದನಿಯಲ್ಲಿ ಹೇಳಿದಳು. ನನಗೇನೋ ಸಂಶಯವಾದರೂ ಆಕೆಯ ಮಾತಿಗೆ ಸಮ್ಮೋಹನಗೊಳಗಾದಂತೆ ನಾನು ನಿಧಾನವಾಗಿ ಆ ಕಡಿದಾದ ಪ್ರಪಾತದ ಅಂಚಿಗೆ ಹೋಗಿ ನಿಂತು ಕೆಳಗೆ ಬಗ್ಗಿ ನೋಡಿದೆ. ಆಗ ಆಗಬಾರದ್ದು ಆಗಿ ಹೋಯಿತು. ಯಾವುದೋ ತೀಕ್ಷ್ಣ ಬೆಳಕು ನನ್ನ ಹಿಂದಿನಿಂದ ಬಿತ್ತು.
“ರೀ, ಸಾಯುವುದಕ್ಕೆ ನಿಮಗೆ ಬೇರೆ ಜಾಗ ಸಿಗಲಿಲ್ವಾ?” ಎಂದು ರಸ್ತೆಯಿಂದ ಜೋರಾಗಿ ನನ್ನನ್ನು ಯಾರೋ ಕೂಗಿ ಕರೆದಂತೆ ಕೇಳಿಸಿತು. ಒಮ್ಮೆಗೆ ಎಚ್ಚರವಾದಂತೆ ಆಗಿ ನೋಡುತ್ತೇನೆ, ಪ್ರಪಾತದಂಚಿನಲ್ಲಿದ್ದ ನಾನು ಇನ್ನೊಂದು ಇಂಚು ಮುಂದಡಿಯಿಟ್ಟರೂ ಆ ಪ್ರಪಾತದೊಳಗೆ ಬೀಳುತ್ತಿದ್ದೆ. ತಕ್ಷಣ ಹಿಂದೆ ತಿರುಗಿ ನೋಡಿ ಗಾಬರಿಯಾದೆ. ಅಲ್ಲಿ ಮಗುವನ್ನು ಎತ್ತಿಕೊಂಡಿದ್ದ ಆ ಮಹಿಳೆ ಇರಲಿಲ್ಲ. ಆಕಡೆ ಈಕಡೆ ನೋಡಿದೆ. ತಾಯಿ ಮತ್ತು ಮಗುವಿನ ಪತ್ತೆಯಿಲ್ಲ. ಇದ್ದಕ್ಕಿಂದಂತೆ ನನ್ನ ಸುತ್ತ ತಂಗಾಳಿ ಬೀಸಿ ಮೈ ಜುಮ್ಮೆನ್ನಿತು. ರಸ್ತೆಯಲ್ಲಿ ನನ್ನ ಕಾರಿನ ಹಿಂದೆ ಯಾವುದೋ ಒಂದು ಗ್ಯಾಸ್ ಟ್ಯಾಂಕರ್ ಬಂದು ನಿಂತಿದೆ. ಕಾರು ನಡುರಸ್ತೆಯಲ್ಲಿದ್ದ ಕಾರಣ ಅದಕ್ಕೆ ಟರ್ನ್ ಮಾಡಲು ಆಗದೆ ಚಾಲಕನ ಸಹಾಯಕ ನನ್ನನ್ನು ನೋಡಿ ಕಿರುಚಿದ್ದಾನೆ. ಭಯಭೀತನಾದ ನಾನು ಓಡಿಕೊಂಡು ಹೋಗಿ ಆತನಿಗೆ ನಾನು ನೋಡಿದ ಆ ಮಹಿಳೆಯ ಬಗ್ಗೆ ಹೇಳಿದೆ. ಅದಕ್ಕಾತ “ಹೌದಾ? ಅಯ್ಯೋ, ನೀವು ಸ್ಪಲ್ಪದರಲ್ಲೇ ಬಚಾವಾದ್ರಿ ಅನ್ನಿಸುತ್ತೆ. ಈ ನಿರ್ಜನ ಜಾಗದಲ್ಲಿ ಮೋಹಿನಿ ಕಾಟವಿದೆ. ನಮಗೂ ಆಗಾಗ ಕಾಣಸಿಗುತ್ತೆ. ಆದಕ್ಕೆ ನಾವ್ಯಾರು ಇಲ್ಲೆಲ್ಲಾ ಗಾಡಿ ನಿಲ್ಲಿಸಲ್ಲ. ಇಲ್ಲದಿದ್ರೆ ಮೋಹಿನಿ ನಿಮಗೆ ಮಾಡಿದ ರೀತಿಯಲ್ಲಿ ಮರುಳುಮಾಡಿ ರಸ್ತೆಯ ಪಕ್ಕಕ್ಕೆ ಕರೆದುಕೊಂಡು ಹೋಗಿ ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಒಂದು ವೇಳೆ ವಾಹನ ನಿಲ್ಲಿಸಿ ಕೆಳಗಿಳಿದು ಹೋಗಿ ಅದರ ಮಾತನ್ನು ಪಾಲಿಸದಿದ್ದರೆ ಕತ್ತನ್ನು ಕಚ್ಚಿ ರಕ್ತ ಹೀರುತ್ತೆ. ಆದರೆ ನಿಮ್ಮ ಅದೃಷ್ಟ ಚೆನ್ನಾಗಿತ್ತು. ನಿಮ್ಮನ್ನದು ತಳ್ಳುವ ಮೊದಲೇ ನಾವು ಬಂದು ಟಾರ್ಚು ಹಾಕಿದ್ದಕ್ಕೆ ನೀವು ಬದುಕಿದಿರಿ. ನನ್ನ ಟಾರ್ಚಿನ ಬೆಳಕಿಗೆ ಹೆದರಿ ಅದು ಮಾಯವಾಯಿತು” ಎಂದ. ಇದುವರೆಗೆ ದೆವ್ವವೆಂಬುದು ಬರೇ ಮೂಢನಂಬಿಕೆಯೆಂದು ನಂಬಿದ್ದ ನನಗೆ ಈ ಸ್ವಾನುಭವವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ನಾನಾಗಲೇ ಹೆದರಿಹೋಗಿದ್ದೆ. ನನ್ನ ಮೈ ನಡುಗುತ್ತಿತ್ತು. ಏನೂ ಹೇಳದೆ ಮತ್ತೆ ಅತ್ತಿತ್ತ ಬೆಳಕು ಹರಿಯಿಸಿದೆ.
ಅದನ್ನು ಗಮನಿಸಿದ ಆತ “ಸಾರ್, ಅದೆಷ್ಟೋ ವರ್ಷಗಳಿಂದ ಈ ಘಾಟಿ ರಸ್ತೆಯಲ್ಲಿ ಆಕ್ಸಿಡೆಂಟುಗಳಾಗುತ್ತಿದೆ. ಹಾಗೆ ಸತ್ತವರ ಪ್ರೇತಾತ್ಮಗಳು ಇಲ್ಲೆಲ್ಲಾ ಸುತ್ತುತ್ತಿರುತ್ತವೆ. ಅದಕ್ಕೆ ರಾತ್ರಿ ಹೊತ್ತು ಒಬ್ಬರೇ ಡ್ರೈವ್ ಮಾಡಿಕೊಂಡು ಹೋಗುವಾಗ ಘಾಟಿಯಲ್ಲಿ ಯಾರೂ ಇಲ್ಲದ ಕಡೆ ತಪ್ಪಿಯೂ ಗಾಡಿಯನ್ನು ನಿಲ್ಲಿಸಬಾರದು, ಗೊತ್ತಾಯ್ತಾ? ಸರಿ, ನೀವು ಬೇಗ ಕಾರು ತೆಗಿಯಿರಿ. ಹಿಂದುಗಡೆಯಿಂದ ವಾಹನಗಳು ಬರ್ತಾ ಇದೆ” ಎಂದು ನನಗೆ ಉಪದೇಶಿಸಿದ. ಭಯದಿಂದ ಬೆವರಿ ತೊಪ್ಪೆಯಾಗಿದ್ದ ನಾನು ಆ ಟ್ಯಾಂಕರಿನವರಿಗೆ ಕೃತಜ್ಞತೆಯನ್ನು ಹೇಳಿ, ಕಾರನ್ನು ಚಲಾಯಿಸಿದೆ. ಹೋಗುತ್ತಾ ಆ ಪ್ರದೇಶವನ್ನು ಮತ್ತೊಮ್ಮೆ ಕೂಲಂಕುಷವಾಗಿ ಗಮನಿಸಿ ಗುರುತುಮಾಡಿಕೊಂಡೆ. ನನ್ನ ಜಂಘಾಬಲವನ್ನೇ ಹುದುಗಿಸಿದ್ದ ಆ ಘಟನೆಯನ್ನು ನಾನು ಯಾರಲ್ಲಿಯೂ ಹೇಳಿಕೊಳ್ಳಲಿಲ್ಲ. ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ. ಆದರೆ ಅಂದಾದ ಭಯದಲ್ಲಿ ನನಗೆ ಎರಡು ದಿವಸ ಜ್ವರ ಬಂದಿತ್ತು.
ಅದಾಗಿ ಐದು ದಿವಸದ ನಂತರ ಕೆಲಸವನ್ನು ಮುಗಿಸಿ ಊರಿನಿಂದ ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಹಿಂತಿರುಗುತ್ತಿದ್ದೆ. ನನ್ನ ಜೊತೆಗೆ ಅಮ್ಮ ಮತ್ತು ನನ್ನ ಸಂಬಂಧಿ ಗೋಪಾಲ ಇದ್ದರು. ಸುಮಾರು ಹನ್ನೊಂದು ಗಂಟೆಗೆ ಗುಂಡ್ಯ ದಾಟುತ್ತಿರುವಂತೆ ಐದುದಿನದ ಹಿಂದಿನ ಆ ಘಟನೆ ನನ್ನ ಮನಸ್ಸಿನಲ್ಲಿ ಮರುಕಳಿಸಿತ್ತು. ಅಂದು ಭಯಬೀತಿಯನ್ನು ಹುಟ್ಟಿಸಿದ್ದ ಆ ಜಾಗದ ಗುರುತು ನನ್ನ ಮನಃಪಠಲದಲ್ಲಿ ಸ್ಪಷ್ಟವಾಗಿತ್ತು. ಆ ತಿರುವು ಹತ್ತಿರ ಬರುತ್ತಿದ್ದಂತೆ ನನ್ನ ಆತಂಕ ಜಾಸ್ತಿಯಾಯಿತು. ಅವರಿಬ್ಬರಲ್ಲಿ ಆ ಬಗ್ಗೆ ಹೇಳದಿದ್ದರೂ ನಾನು ಮೂತ್ರಶಂಕೆಯ ನೆಪದಲ್ಲಿ ಅದೇ ತಿರುವಿನ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ ರಸ್ತೆಯನ್ನು ದಾಟಿ ಬಲಕ್ಕಿರುವ ಆ ಪ್ರಪಾತದ ಹತ್ತಿರ ಬಂದೆ. ಯಾವುದೇ ತಡೆಗೋಡೆಯಿಲ್ಲದ ಆ ಜಾಗದಲ್ಲಿ ಬಂದು ನಿಂತೆ. ಭಯವಾಗಿತು. ಹಿಂದೆ ತಿರುಗಿ ನನ್ನ ಹಿಂದೆ ಆ ಮೋಹಿನಿಯಿಲ್ಲವೆಂದು ಖಾತ್ರಿಮಾಡಿಕೊಂಡೆ. ಏನೋ ಅವ್ಯಕ್ತವಾದ ಭಯವಿದ್ದರೂ ಬಗ್ಗಿ ಕೆಳಗೆ ನೋಡಿದಾಗ ಆಳದ ತಳದಲ್ಲಿ ಏನೋ ಗೋಚರಿಸಿತು.
ಭಯ ಮಿಶ್ರಿತ ಕುತೂಹಲದಿಂದ ಇನ್ನೂ ತುದಿಗೆ ಹೋಗಿ ನೋಡಿದೆ. ನನ್ನ ಮೈ ಜುಂ ಎನ್ನಿತು. ಅಲ್ಲಿ ಕಾರೊಂದರ ಅಸ್ತಿಪಂಜರವು ಕಂಡಿತು. ಬಹುಶಃ ಕಾರು ಆ ಪ್ರಪಾತಕ್ಕೆ ಉರುಳಿ ಅಪಘಾತವಾಗಿ ಅನೇಕ ವರ್ಷಗಳಾದಂತೆ ಕಂಡಿತು. ಅಂದರೆ ಆ ಲಾರಿಯವನು ಹೇಳಿದಂತೆ, ಆ ಕಾರಿನಲ್ಲಿ ಸತ್ತವರು ದೆವ್ವವಾಗಿ ಅಲ್ಲಿ ಸುತ್ತುತ್ತಿರಬಹುದೆಂದುಕೊಂಡೆ. ಮನಸ್ಸು ಕಲಕಿತು. ಆಗ ಅದೇ ತಂಗಾಳಿ ಬೀಸಿದಂತಾಗಿ ನನ್ನ ಭಯ ಇಮ್ಮಡಿಯಾಯಿತು. ಕಾರಿನ ಪಳಿಯುಳಿಕೆಯ ಅನತಿ ದೂರದಲ್ಲಿ ನೇತ್ರಾವತಿಯು ಪಾರದರ್ಶಕವಾಗಿ ಹರಿಯುತ್ತಿದ್ದಳು. ಮನಸ್ಸಿನಲ್ಲಿ ಮಂಜುನಾಥನನ್ನು ಧ್ಯಾನಿಸುತ್ತಾ ಧೈರ್ಯ ತಂದುಕೊಂಡೆ.
ಮೌನವಾಗಿ ಬಂದು ಕಾರಿನಲ್ಲಿ ಕುಳಿತು ಹೊರಟೆ. ಅಲ್ಲಿಂದ ಕೆಲವು ತಿರುವು ದಾಟಿ ಮೇಲೆ ಹೋದಾಗ ರಸ್ತೆಯ ಪಕ್ಕದಲ್ಲಿ ಒಂದು ಚಿಕ್ಕ ಗುಡಿ ಮತ್ತು ಅಂಗಡಿಗಳಿದ್ದವು. ಏನೋ ಆಲೋಚಿಸಿ ಎಳನೀರು ಕುಡಿಯುವ ನೆಪದಲ್ಲಿ ಅಲ್ಲಿ ಕಾರನ್ನು ನಿಲ್ಲಿಸಿದೆ.
ಒಬ್ಬ ತಾತಪ್ಪ ಸಿಹಿಯಾಳ ಕೆತ್ತಿಕೊಟ್ಟರು. ಅವರಲ್ಲಿ ಲೋಕಾಭಿರಾಮವಾಗಿ ಮಾತನಾಡಿದಾಗ ಅವರು ಅಲ್ಲಿ ಅನೇಕ ವರ್ಷಗಳಿಂದ ತಳವೂರಿದ್ದಾರೆಂದು ಗೊತ್ತಾಯಿತು. ಅವರಲ್ಲಿ ಸ್ವಾಭಾವಿಕವಾಗಿ ನಾನು ಕಂಡ ಆ ಕಾರು ಅಪಘಾತದ ಬಗ್ಗೆ ಕೇಳಿದೆ. ಆಗ ಅವರು ಆ ಘಟನೆಯನ್ನು ಹೀಗೆ ವಿವರಿಸಿದರು. “ಸುಮಾರು ಹತ್ತು ವರ್ಷದ ಕೆಳಗೆ ರಾತ್ರಿಯ ಹೊತ್ತು ಒಂದು ಕಾರಿನಲ್ಲಿ ಗಂಡ ಹೆಂಡತಿ ಮತ್ತು ಮಗು ಹೋಗುತ್ತಿರಬೇಕಾದರೆ ಆ ತಿರುವಿನಲ್ಲಿ ಒಮ್ಮೆಲೆ ರಸ್ತೆಯ ಮಧ್ಯೆ ಬಂದ ಮೋಹಿನಿಯನ್ನು ಕಂಡು ಆತ ಭಯಗ್ರಸ್ಥನಾದ. ಆಕೆಯ ಮೇಲೆ ಕಾರು ಹರಿಯುವುದನ್ನು ತಪ್ಪಿಸುವ ಭರದಲ್ಲಿ ಕಾರು ಆತನ ನಿಯಂತ್ರಣ ತಪ್ಪಿ ಆ ಪ್ರಪಾತಕ್ಕೆ ಬಿತ್ತಂತೆ. ಆ ಅಪಘಾತದಲ್ಲಿ ಗಂಡ ಕಾರಿನಲ್ಲೇ ಪ್ರಾಣ ಬಿಟ್ಟರೆ ಆ ಮಹಿಳೆ ಮತ್ತು ಮಗು ಗಾಯಗೊಂಡು ಕಾರಿನಿಂದ ಹೊರಗೆಸೆಯಲ್ಪಟ್ಟರಂತೆ. ಅವಳು ಕೆಳಗಿನಿಂದ ಜೋರಾಗಿ “ನಮ್ಮನ್ನು ರಕ್ಷಿಸಿ, ಸಹಾಯ ಮಾಡಿ” ಎಂದು ಕಿರುಚುತ್ತಿದ್ದಳಂತೆ. ಅದನ್ನು ಕೇಳಿದ ವಾಹನಚಾಲಕರು ನಿಲ್ಲಿಸಿದರೂ ರಾತ್ರಿ ಹೊತ್ತು ಅವರಿಗೆ ಏನೂ ಮಾಡಲಾಗಲಿಲ್ಲ. ಕೊನೆಗೆ ಅವರನ್ನು ಬೆಳಿಗ್ಗೆ ರಕ್ಷಿಸಿದಾಗ ಅತೀವವಾದ ರಕ್ತಸ್ರಾವದಿಂದ ಅವರಿಬ್ಬರೂ ಸಾವನ್ನಪ್ಪಿದ್ದರು” ಎಂಬ ಹೃದಯವಿದ್ರಾವಕ ಘಟನೆಯನ್ನು ವಿವರಿಸಿದ. ಅದನ್ನು ಕೇಳಿ ಭಾರವಾದ ಹೃದಯದಿಂದ ನಾನು ಏನೂ ಹೇಳದೆ ಅಲ್ಲಿಂದ ಬೆಂಗಳೂರಿಗೆ ತೆರಳಿದೆ. ಆದರೆ ಆ ಫಟನೆ ನನ್ನ ಮನಸ್ಸಿನಲ್ಲಿ ಎಂದಿಗೂ ಅಚ್ಚಳಿಯದೇ ಉಳಿದಿದೆ.
ಇದನ್ನು ಓದಿದ ನೀವು ಇದೊಂದು ನೈಜಘಟನೆಯೋ ಅಥವಾ ಕಥೆಯೋ ಎಂಬ ಗೊಂದಲಕ್ಕೆ ಬಂದರೆ ನನ್ನ ಉತ್ತರ “ಯದ್ಭಾವೋ ತದ್ಭವತಿ” ನಿಮ್ಮ ನಂಬಿಕೆಗೆ ಬಿಟ್ಟಿದ್ದು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಆದರೆ ಶಿರಾಡಿ ಘಾಟಿಯಲ್ಲಿ ರಾತ್ರಿ ಹೊತ್ತು ಒಬ್ಬರೇ ಹೋಗುತ್ತಿದ್ದರೆ ನಿರ್ಮಾನುಷ ಜಾಗದಲ್ಲಿ ವಾಹನ ನಿಲ್ಲಿಸಿ ಹೊರಗೆ ಇಳಿಯಬೇಡಿ.
✍? ರಮೇಶ್ ಶೆಟ್ಟಿಗಾರ್ ಮಂಜೇಶ್ವರ.
9342936622