(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.14. ಐದು ವರ್ಷಗಳಿಂದ 104 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸಂಚಾರಿ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದು, 10,400 ರೂ. ದಂಡ ಕಟ್ಟಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.
ಜಾಲಹಳ್ಳಿಯ ಎಂ.ಎಸ್. ಪಾಳ್ಯ ನಿವಾಸಿ ಮಹಮ್ಮದ್ ಶಬ್ಬೀರ್ ಎಂಬಾತ ಕಳೆದ ಐದು ವರ್ಷಗಳಿಂದ ತನ್ನ ದ್ವಿಚಕ್ರ ವಾಹನದಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದ ಚಾಲನೆ, ಟ್ರಿಪಲ್ ರೈಡ್ ಸೇರಿದಂತೆ 104 ಬಾರಿ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ವಾಹನದ ದಾಖಲೆ ಪರಿಶೀಲನೆ ವೇಳೆ ಈತ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದ್ದು, ಈ ಹಿಂದಿನ ನಿಯಮದಂತೆ ಪ್ರತಿಯೊಂದು ಪ್ರಕರಣಕ್ಕೆ 100 ರೂ.ನಂತೆ ಒಟ್ಟು 10400 ದಂಡವನ್ನು ಕಟ್ಟುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಶಬೀರ್ ನ ಮನವಿ ಮೇರೆಗೆ ದಂಡದ ಮೊತ್ತ ಕಟ್ಟಲು ಎರಡು ತಿಂಗಳ ಕಾಲಾವಕಾಶ ನೀಡಿದ ಪೊಲೀಸರು ವಾಹನವನ್ನು ಜಪ್ತಿ ಮಾಡಿದ್ದರಲ್ಲದೆ ದಂಡ ಕಟ್ಟದಿದ್ದಲ್ಲಿ ಹೊಸ ದಂಡದ ರೂಪದಂತೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಬೀರ್ ನನ್ನು ಎಚ್ಚರಿಸಿದ್ದರು. ಇದೀಗ 10400 ದಂಡ ಕಟ್ಟಿರುವ ಶಬೀರ್ ವಾಹನವನ್ನು ಬಿಡಿಸಿಕೊಂಡಿದ್ದಾರೆ.