ಮಹಿಳೆಯರ ದೂರುಗಳಿಗೆ ತ್ವರಿತ ಸ್ಪಂದಿಸಲು ‘ಪಿಂಕ್ ಗ್ರೂಪ್’ ರಚನೆ: ಡಾ.ಪಿ.ಎಸ್.ಹರ್ಷ ➤ ಬ್ರ್ಯಾಂಡ್ ಮಂಗಳೂರು ಅಂಗವಾಗಿ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ

(ನ್ಯೂಸ್ ಕಡಬ) newskadaba@gmail.com ಮಂಗಳೂರು, ಅ.11. ನಗರದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನೀಡುವ ದೂರುಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲು ‘ಪಿಂಕ್ ಗ್ರೂಪ್’ ಎಂಬ ವಾಟ್ಸ್ಅಪ್ ಗ್ರೂಪ್ ರಚಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

 

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ವತಿಯಿಂದ ಬೆಸೆಂಟ್ ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ‘ಮೈಬೀಟ್ ಮೈ ಪ್ರೈಡ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಅವರ ನೆರವಿಗೆ ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಈ ವಾಟ್ಸ್ಅಪ್ ಗ್ರೂಪ್ ನ್ನು ರಚಿಸಲಾಗುವುದು ಎಂದು ಡಾ.ಹರ್ಷ ತಿಳಿಸಿದ್ದಾರೆ.

Also Read  ಮಂಗಳೂರು: ಇಲೆಕ್ಟ್ರಿಕ್ ರಿಕ್ಷಾಗಳ ಸಂಚಾರಕ್ಕೆ ಅನುಮತಿ - ಆಟೋ ಚಾಲಕರಿಂದ ಪ್ರತಿಭಟನೆ

,ವಿದ್ಯಾರ್ಥಿಗಳು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುವುದನ್ನು ತಪ್ಪಿಸಲು ಮನಸ್ಸಿಗೆ ಮುದ ನೀಡುವ ಹವ್ಯಾಸ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿರು ನಮ್ಮ ಮಾಹಿತಿಗಳನ್ನು ಪಡೆದುಕೊಂಡು ನಮಗೆ ವಂಚಿಸುವ ಸಾಧ್ಯತೆಗಳ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಾದಕ ವ್ಯಸನಕ್ಕೆ ಬಲಿಯಾದವರನ್ನು ಹೊರತರುವುದಕ್ಕೆ ಆಪ್ತ ಸಲಹೆ, ಕೆಲವೊಮ್ಮೆ ಅಮಲು ವ್ಯಸನದಿಂದ ಹೊರಬರಲು ಚಿಕಿತ್ಸೆಯ ಅಗತ್ಯವೂ ಕಂಡು ಬರಬಹುದು ಎಂದರು. ಸಮಾಜದಲ್ಲಿ ಅಪರಾಧಗಳನ್ನು ತಡೆಯಲು ಜವಾಬ್ದಾರಿಯುತ ನಾಗರಿಕ ಪಾತ್ರವೂ ಮುಖ್ಯ. ಅಪರಾಧ ಸಂಭವಿಸಿದ ತಕ್ಷಣ ಈ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಇದು ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಹಾಯಕವಾಗುತ್ತದೆ. ಮಾಹಿತಿ ನೀಡಲು ತುರ್ತು ಕರೆ, ವಾಟ್ಸ್ಅಪ್, ಇ – ಮೇಲ್ ಗಳನ್ನು ಬಳಸಬಹುದು ಎಂದು ಡಾ.ಹರ್ಷ ಸಲಹೆ ನೀಡಿದರು.

Also Read  ಮರ್ಧಾಳ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ➤ ನಾಲ್ವರು ಗಂಭೀರ

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ದೇವಾನಂದ ಪೈ, ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ಆತ್ಮಭೂಷಣ್ ಸ್ವಾಗತಿಸಿದರು. ಹರೀಶ್ ಮೋಟುಕಾನ ವಂದಿಸಿದರು. ಉಪನ್ಯಾಸಕಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top