(ನ್ಯೂಸ್ ಕಡಬ) newskadaba.com ಕಡಬ, ಸೆ.27. ಹೆಲ್ಮೆಟ್ ಧರಿಸದ ಬೈಕ್ ಸವಾರನೋರ್ವ ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಇಳಿಸಿ ತೆರಳಿದ್ದು, ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆಹಿಡಿದ ಪೊಲೀಸರು 500 ರೂ. ದಂಡ ವಿಧಿಸಿದ ಘಟನೆ ಶುಕ್ರವಾರದಂದು ಕಡಬದಲ್ಲಿ ನಡೆದಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಡಬದಲ್ಲಿ ಗುರುವಾರದಂದು ನಡೆದ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು ಬಸ್ಸು ನಿಲ್ದಾಣದವರೆಗೆ ಬಿಡಲೆಂದು ಯುವಕನೋರ್ವ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ್ದು, ಈ ವೇಳೆ ಕಡಬದ ಕಾಲೇಜು ಕ್ರಾಸ್ ಬಳಿ ಹೈವೇ ಪಟ್ರೋಲ್ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ತೆರಳಿದನೆನ್ನಲಾಗಿದೆ. ಇದನ್ನು ಗಮನಿಸಿದ ಪೊಲೀಸ್ ವಾಹನದ ಸಿಬ್ಬಂದಿ ಬೈಕಿನಿಂದ ಇಳಿದ ಯುವಕನನ್ನು ಅವ್ಯಾಚ ಶಬ್ದಗಳಿಂದ ಕರೆದು, ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರೂ. ದಂಡ ವಿಧಿಸಿ ರಶೀದಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ., ಶರೀಫ್ ಎ.ಎಸ್. ಮೊದಲಾದವರು ಪೊಲೀಸರೊಂದಿಗೆ ಪ್ರಶ್ನಿಸಿ ತಗಾದೆ ತೆಗೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ರಫ್ ಶೇಡಿಗುಂಡಿ ಬೈಕಿನಲ್ಲಿ ಹಿಂಬದಿ ಸವಾರನಾಗಿ ಆಗಮಿಸಿದ ವ್ಯಕ್ತಿಯು ಬೈಕಿನಿಂದ ಇಳಿದು ತೆರಳುತ್ತಿದ್ದ ವೇಳೆ ಅವ್ಯಾಚ ಶಬ್ದಗಳಿಂದ ಬೈದು 500 ರೂ. ದಂಡ ವಿಧಿಸಿರುವುದು ಸರಿಯಲ್ಲ. ಪೊಲೀಸರು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಹೈವೇ ಪಟ್ರೋಲ್ ನಲ್ಲಿದ್ದ ಎಎಸ್ಐ ಯೋಗೀಂದ್ರ ಪ್ರತಿಕ್ರಿಯಿಸಿ, ನಾವು ಕಡಬದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ನಮ್ಮನ್ನು ಕಂಡೊಡನೆ ಹಿಂತಿರುಗಿ ಹೋಗಿದ್ದು, ಹಿಂಬದಿ ಸವಾರನನ್ನು ಕರೆದು ಕಾನೂನು ಪ್ರಕಾರವಾಗಿ ದಂಡ ವಿಧಿಸಿರುತ್ತೇವೆ. ಯಾವುದೇ ಅವ್ಯಾಚ ಶಬ್ದಗಳಿಂದ ನಿಂದಿಸಿಲ್ಲ ಎಂದಿದ್ದಾರೆ.