(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.19. ರಬ್ಬರ್ ತೋಟದಲ್ಲಿನ ಶೆಡ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಸುಮಾರು 1 ಕೋಟಿ ರೂ. ಮೌಲ್ಯದ 51 ಕೆ.ಜಿ. 730 ಗ್ರಾಂ. ತೂಕದ 10 ಆನೆ ದಂತ ಸೇರಿದಂತೆ ಒಂದು ಡಬಲ್ ಬ್ಯಾರೆಲ್ ರೈಫಲ್ ಹಾಗೂ 8 ಮದ್ದುಗುಂಡು ವಶಕ್ಕೆ ಪಡೆದುಕೊಂಡಿರುವ ಪುತ್ತೂರು ಸಂಚಾರಿ ಅರಣ್ಯ ದಳ ಅಧಿಕಾರಿಗಳ ತಂಡ ಮೂವರು ಆರೋಪಿಗಳನ್ನು ಬುಧವಾರದಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಜಿರೆ ಸುರ್ಯ ರಸ್ತೆಯ ದೂಜಿರಿಗೆ ನಿವಾಸಿ ಅಬ್ರಹಾಂ ಎಂ.ಎ.(56), ಕೇರಳದ ಸುರೇಶ್ ಬಾಬು (49) ಹಾಗೂ ಹಾಸನ ಜಿಲ್ಲೆಯ ಕಚಾಯ ಹೋಬಳಿ ಕಬ್ಬತ್ತಿ ಕ್ರಾಸ್ ರಮೇಶ್ ಕೆ.ಜಿ(31) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಮಂಗಳೂರಿನ ಅನ್ವರ್ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಉಜಿರೆ ಸುರ್ಯ ರಸ್ತೆಯ ದೂಜಿರಿಗೆ ನಿವಾಸಿ ಅಬ್ರಹಾಂ ಎಂಬಾತನ ರಬ್ಬರ್ ತೋಟದ ಶೆಡ್‍ನಲ್ಲಿ ದಂತ ಇರಿಸಲಾಗಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಂಚಾರಿ ಅರಣ್ಯ ತಂಡದ ಅಧಿಕಾರಿಗಳು ಬುಧವಾರದಂದು ದಾಳಿ ನಡೆಸಿ ಒಂದು ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದು ಮೂರು ತಿಂಗಳಿಂದ ಆನೆ ದಂತ ದಾಸ್ತಾನು ಇರಿಸಿದ್ದು ಮಾತ್ರವಲ್ಲದೆ ಮಾರಾಟ ಜಾಲದ ಕುರಿತು ಇಲಾಖೆಗೆ ಮಾಹಿತಿ ಲಭಿಸಿತ್ತು.
ಪುದುವೆಟ್ಟು ಅರಣ್ಯದಲ್ಲಿ ಆನೆಯೊಂದನ್ನು ಹೊಡೆದುರುಳಿಸಿ ದಂತ ಎಗರಿಸಿರುವ ಕುರಿತು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, 8 ವರ್ಷ ಹಳೆಯ ದಂತವೂ ಸೇರಿದೆ. ಓರ್ವ ಗಲ್ಫ್ ರಾಷ್ಟ್ರ ದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಊರಿಗೆ ಬಂದು ದಂತ ಸಾಗಾಟ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಪ್ರಕರಣದ ಹಿಂದೆ ಬೃಹತ್ ಜಾಲವೊಂದು ಇರುವ ಕುರಿತು ಇಲಾಖೆಯು ಅನುಮಾನ ವ್ಯಕ್ತಪಡಿಸಿದೆ.
ಸಿಐಡಿ ಅರಣ್ಯ ಘಟಕ ಬೆಂಗಳೂರು ಎಡಿಜಿಪಿ ಡಾ. ರವಿಂದ್ರನಾಥನ್, ಸಿಐಡಿ ಅರಣ್ಯ ಘಟಕ ಮಂಗಳೂರು ಎಸ್.ಪಿ. ಸುರೇಶ್ ಬಾಬು, ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಪಿಎಸ್‍ಐ ಪುರುಷೋತ್ತಮ್ ಎ. ಮಾರ್ಗದರ್ಶನದಲ್ಲಿ ಸಿಬಂದಿ ಜಗನ್ನಾಥ್ ಶೆಟ್ಟಿ, ಪ್ರವೀಣ್, ಉದಯ್ ನಾಯಕ್, ಮಹೇಶ್ ಟಿ., ದೇವರಾಜ ಎಚ್., ಸುಂದರ ಶೆಟ್ಟಿ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ಹಾಗೂ ಸಿಬಂದಿ, ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.